ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ದೇವೇಂದ್ರ ಫಡ್ನವೀಸ್ ಆಯ್ಕೆ
ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮುಂಬೈ: ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇಂದಿಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ದೇವೇಂದ್ರ ಫಡ್ನವೀಸ್ ಹೆಸರನ್ನು ಪ್ರಸ್ತಾಪಿಸಿದರು. ಬಳಿಕ ಈ ಪ್ರಸ್ತಾಪಕ್ಕೆ ಸುಧೀರ್ ಮುಂಗಂತಿವಾರ್, ಹರಿಭೌ ಬಾಗಡೆ ಮತ್ತು ಸಂಜಯ್ ಕುಟೆ ಧ್ವನಿಗೂಡಿಸಿದರು.
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಕೂಡ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ವೀಕ್ಷಕರಾಗಿ ಭಾಗಿಯಾಗಿದ್ದರು.
ಸರ್ಕಾರದಲ್ಲಿ ಸ್ಥಾನ ಹಂಚಿಕೆ ಕುರಿತು ಬಿಜೆಪಿ-ಶಿವಸೇನೆ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಹೊಸ ವಿಧಾನಸಭೆಯಲ್ಲಿ ಕ್ರಮವಾಗಿ 105 ಮತ್ತು 56 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಮತ್ತು ಶಿವಸೇನಾದಲ್ಲಿ ಅಧಿಕಾರ ಹಂಚಿಕೆ ಕುರಿತು ಭಿನ್ನಾಭಿಪ್ರಾಯ ಮೂಡಿದೆ.
ಶಿವಸೇನೆ, ಮುಖ್ಯಮಂತ್ರಿ ಪದವಿಯನ್ನು ತನ್ನ ಪಕ್ಷಕ್ಕೆ ನೀಡುವಂತೆ ಒತ್ತಾಯಿಸಿದೆ. ಅಲ್ಲದೆ 50:50 ಸೂತ್ರದಲ್ಲಿ ಸ್ಥಾನ ಹಂಚಿಕೆ ಮಾಡಿಕೊಳ್ಳಲು ಒತ್ತಾಯಿಸಿದೆ. ಆದರೆ ಇನ್ನೂ ಐದು ವರ್ಷಗಳ ಕಾಲ ತಾನೇ ಸಿಎಂ ಆಗಿ ಮುಂದುವರೆಯುವುದಾಗಿ ಫಡ್ನವೀಸ್ ಹೇಳಿದ್ದಾರೆ. ಅದಲ್ಲದೆ 50:50 ಸೂತ್ರಕ್ಕೂ ಬಿಜೆಪಿ ಒಪ್ಪಿಗೆ ಸೂಚಿಸಿಲ್ಲ.
ಇದೇ ವೇಳೆ, ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಗೆ ನೀಡುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾವುದೇ ನಿರ್ಧಾರ ತಿಳಿಸಿಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ.