`ದೀದಿ ಕೆ ಬೋಲೋ`; ನೂತನ ಅಭಿಯಾನಕ್ಕೆ ಮೊರೆಹೋದ ಮಮತಾ ಬ್ಯಾನರ್ಜೀ
2019 ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ ನಂತರ ಎಚ್ಚೆತ್ತುಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಈಗ ನೂತನ ಅಭಿಯಾನದ ಮೂಲಕ ಜನರ ಒಲವು ಗಳಿಸಿ ಕೊಳ್ಳುವತ್ತ ಮುಂದಾಗಿದ್ದಾರೆ.
ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ ನಂತರ ಎಚ್ಚೆತ್ತುಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಈಗ ನೂತನ ಅಭಿಯಾನದ ಮೂಲಕ ಜನರ ಒಲವು ಗಳಿಸಿ ಕೊಳ್ಳುವತ್ತ ಮುಂದಾಗಿದ್ದಾರೆ.
2021 ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಈಗ ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಈ ನೂತನ ಯೋಜನೆಯನ್ನು ಘೋಷಿಸಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಇಗ ರಾಜ್ಯ ಸರ್ಕಾರವು ದೀದಿ ಕೆ ಬೋಲೋ ( ನಿಮ್ಮ ಸಹೋದರಿಗೆ ಹೇಳಿ) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನ ಪ್ರಮುಖವಾಗಿ ಮತದಾರ ದೂರುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎನ್ನಲಾಗಿದೆ.
ಈ ಅಭಿಯಾನದ ಅಡಿಯಲ್ಲಿ ಒಂದು ತಂಡವು ದೂರುಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವುಗಳನ್ನು ಮುಖ್ಯಮಂತ್ರಿಗೆ ತಲುಪಿಸುತ್ತದೆ, ಅವರು ನಂತರ ದೂರುದಾರರಿಗೆ ವೈಯಕ್ತಿಕವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸುತ್ತಾರೆ ಎನ್ನಲಾಗಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಕಲ್ಪನೆಯಲ್ಲಿ ಮೂಡಿ ಬಂದಿರುವ ಈ ಯೋಜನೆ ಮೊದಲ ಹಂತದಲ್ಲಿ ರಾಜ್ಯಾದ್ಯಂತ ಸುಮಾರು ೧ ಸಾವಿರ ಸ್ಥಳಗಳಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಆಗಸ್ಟ್ 9 ರಂದು ಟಿಎಂಸಿ ಬಿಜೆಪಿ ವಿರುದ್ಧ ‘ಭಾರತ್ ಚೋರೋ ಆಂದೋಲನ್’ (ಭಾರತದಿಂದ ತೊಲಗಿ )ವನ್ನು ಪ್ರಾರಂಭಿಸಲಿದ್ದು, ಆಗಸ್ಟ್ 28 ರಂದು ಪಕ್ಷವು ಕೋಲ್ಕತ್ತಾದ ಮಾಯೊ ರಸ್ತೆಯಲ್ಲಿ ಟಿಎಂಸಿ ಸ್ಥಾಪನಾ ದಿನವನ್ನು ಆಚರಿಸಲಿದೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಟಿಎಂಸಿ 42 ರಲ್ಲಿ 22 ಸ್ಥಾನಗಳನ್ನು, ಬಿಜೆಪಿ ಎರಡರಿಂದ 18 ಸ್ಥಾನಗಳನ್ನು ಪಡೆದಿದೆ. ಈ ಹಿನ್ನಲೆಯಲ್ಲಿ ಈಗ ಟಿಎಂಸಿ 2021 ರಲ್ಲಿನ ಚುನಾವಣೆಯ ಮೇಲೆ ಕಣ್ಣಿಟ್ಟಿರುವುದರಿಂದ ಈ ನೂತನ ಯೋಜನೆಯನ್ನು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದೆ.