ಶೀಘ್ರದಲ್ಲೇ 55 ರೂ.ಗೆ ಸಿಗಲಿದೆ ಪೆಟ್ರೋಲ್...!
ಕೇಂದ್ರ ಸರ್ಕಾರ ದೇಶದಲ್ಲಿ ಒಟ್ಟು ಐದು ಎಥೆನಾಲ್ ಉತ್ಪಾದನಾ ಘಟಕಗಳನ್ನು ತೆರೆಯಲು ಯೋಜನೆ ರೂಪಿಸಿದೆ.
ರಾಯಪುರ್: ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಶೀಘ್ರದಲ್ಲೇ ಪೆಟ್ರೋಲ್ ಪ್ರತಿ ಲೀಟರ್'ಗೆ 55 ರೂ. ಮತ್ತು ಡಿಸೇಲ್ 50 ರೂ.ಗೆ ದೊರೆಯಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಚತ್ತೀಸ್ಗಢದ ದುರ್ಗ ಜಿಲ್ಲೆಯ ಚರೋಡದಲ್ಲಿ 8 ರಸ್ತೆ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ದೇಶದಲ್ಲಿ ಒಟ್ಟು ಐದು ಎಥೆನಾಲ್ ಉತ್ಪಾದನಾ ಘಟಕಗಳನ್ನು ತೆರೆಯಲು ಯೋಜನೆ ರೂಪಿಸಿದ್ದು, ಇವುಗಳು ಕಾರ್ಯಾರಂಭಗೊಂಡ ಬಳಿಕ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಲಿದ್ದು, ಪೆಟ್ರೋಲ್ ಪ್ರತಿ ಲೀಟರ್ ಗೆ 55 ರೂ. ಹಾಗೂ ಡೀಸೆಲ್‌ಗೆ ಪ್ರತಿ ಲೀಟರ್ 50 ರೂ.ಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಪರ್ಯಾಯ ಇಂಧನಗಳ ಬಳಕೆಯನ್ನು ಕಾರ್ಯರೂಪಕ್ಕೆ ತರಲು ರಾಯಪುರದಲ್ಲಿ ಜೈವಿಕ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಸ್ಥಾಪಿಸಬೇಕಿದೆ. ಇದು ದೇಶದಲ್ಲಿ ಪರ್ಯಾಯ ಇಂಧನಗಳ ಉತ್ಪಾದನೆಗೆ ಸಹಾಯವಾಗಲಿದೆ ಎಂದರು.
ಪೆಟ್ರೋಲ್, ಡಿಸೇಲ್'ಗೆ ಬದಲಾಗಿ ಎಥೆನಾಲ್, ಮಿಥನಾಲ್, ಜೈವಿಕ ಇಂಧನ ಮತ್ತು ಪಿಎನ್'ಜಿ ಬಳಸುವುದರಿಂದ ತೈಲ ಬೆಳೆ ಗಣನೀಯವಾಗಿ ಕಡಿಮೆ ಆಗಲಿದೆ. ಪ್ರಸ್ತುತ 8 ಲಕ್ಷ ಕೋಟಿ ರೂ. ಮೌಲ್ಯದ ಪೆಟ್ರೋಲ್ ಹಾಗೂ ಡೀಸಲ್ ಆಮದು ಮಾಡಿಕೊಳ್ಳಲಾಗುತ್ತಿದೆ. ಡಾಲರ್ ಎದುರು ರೂಪಾಯಿ ಕುಸಿತವಾಗುತ್ತಿರುವುದರಿಂದ ಇಂಧನ ಬೆಲೆ ಏರುತ್ತಿದೆ. ಆದಿವಾಸಿ, ರೈತರು ಅರಣ್ಯವಾಸಿಗಳ ಸಹಾಯದಿಂದ ಎಥನಾಲ್, ಮೆಥನಾಲ್, ಬಯೋ ಇಂಧನಗಳನ್ನು ಉತ್ಪತ್ತಿ ಮಾಡಿ ವಿಮಾನ ಹಾರಾಟಕ್ಕೆ ಬಳಕೆ ಮಾಡಬಹುದಾಗಿದೆ ಎಂದರು.