VIDEO: ಎಸ್ಪಿ-ಬಿಎಸ್ಪಿ ಬೃಹತ್ ರ‍್ಯಾಲಿಯಲ್ಲಿ ಮಾಯಾವತಿ ಪಾದ ಮುಟ್ಟಿ ನಮಸ್ಕರಿಸಿದ ಡಿಂಪಲ್
ಕನೌಜ್ ನಲ್ಲಿ ಗುರುವಾರ ನಡೆದ ಎಸ್ಪಿ-ಬಿಎಸ್ಪಿ ಬೃಹತ್ ರ‍್ಯಾಲಿಯಲ್ಲಿ ಬಿಎಸ್ಪಿ ಮಾಯಾವತಿ ಭಾಗಿಯಾಗಿ ಕನೌಜ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಡಿಂಪಲ್ ಯಾದವ್ ಪರವಾಗಿ ಮತಯಾಚಿಸಿದರು.
ಕನೌಜ್: 2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೆಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಬಿಜೆಪಿಗೆ ಕಠಿಣ ಸವಾಲನ್ನು ಒಡ್ಡಿದೆ. ಈಗ ಇಬ್ಬರೂ ತಮ್ಮ ಸ್ನೇಹವನ್ನು ಪರಸ್ಪರ ತೋರಿಸುವುದಕ್ಕೆ ಯಾವುದೇ ಅವಕಾಶ ಬಿಡುವುದಿಲ್ಲ. ಇತ್ತೀಚಿಗೆ ತಮ್ಮ ಹಲವು ವರ್ಷಗಳ ವೈಮಸ್ಯ ತೊರೆದು ಮೈನ್‌ಪುರಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮುಲಾಯಂ ಸಿಂಗ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಗುರುವಾರ ಕನೌಜ್ ನಲ್ಲಿ ಆಯೋಜಿಸಲಾಗಿದ್ದ ಎಸ್ಪಿ-ಬಿಎಸ್ಪಿ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಮಾಯಾವತಿಯವರ ಪಾದ ಮುಟ್ಟಿ ನಮಸ್ಕರಿಸಿದರು.
ಪಾದ ಮುಟ್ಟಿ ನಮಸ್ಕರಿಸಿದ ಡಿಂಪಲ್ ಯಾದವ್ ರನ್ನು ಆಶಿರ್ವದಿಸಿದ ಮಾಯಾವತಿ ಬಳಿಕ ಎಸ್ಪಿ-ಬಿಎಸ್ಪಿ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಎಸ್ಪಿ-ಬಿಎಸ್ಪಿ ಮೈತ್ರಿ ಅಭ್ಯರ್ಥಿಯಾಗಿ ಕನೌಜ್ ಕ್ಷೇತ್ರದಿಂದ ಡಿಂಪಲ್ ಯಾದವ್ ಕಣಕ್ಕಿಳಿದಿದ್ದಾರೆ. ಡಿಂಪಲ್ ನಮ್ಮ ಪರಿವಾರದ ಸೊಸೆ. ಎಸ್ಪಿ-ಬಿಎಸ್ಪಿ ಕಾರ್ಯಕರ್ತರು ಅವರ ವಿಜಯಕ್ಕಾಗಿ ಒಟ್ಟಾಗಿ ಶ್ರಮಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಎಸ್ಪಿ-ಬಿಎಸ್ಪಿ ಮೈತ್ರಿ ನಂತರ ಡಿಂಪಲ್ ಅವರನ್ನು ನನ್ನ ಕುಟುಂಬದ ಸದಸ್ಯೆ, ಸೊಸೆ ಎಂದು ಹೃತ್ಪೂರ್ವಕವಾಗಿ ಸ್ವೀಕರಿಸಿರುವುದಾಗಿ ತಿಳಿಸಿದ ಮಾಯಾವತಿ, ಅಖಿಲೇಶ್ ಯಾದವ್ ನನಗೂ, ಕುಟುಂಬದ ಹಿರಿಯರಿಗೂ ಬಹಳ ಗೌರವ ಪ್ರೀತಿ ತೋರುತ್ತಾರೆ. ಹಾಗಾಗಿಯೇ ಅವರ ಬಗ್ಗೆ ನನಗೂ ವಿಶೇಷ ಪ್ರೀತಿಯಿದೆ. ಇದು ಭವಿಷ್ಯದಲ್ಲೂ ಮುಂದುವರೆಯಲಿದೆ ಎಂದರು.