ಕೊಲ್ಕತ್ತಾ: ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ, ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಹೊರಡಿಸಿದ್ದ ಬಂಧನದ ವಾರೆಂಟ್ ಗೆ ಕೊಲ್ಕತಾದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. 


COMMERCIAL BREAK
SCROLL TO CONTINUE READING

ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ನೀಡಿರುವ ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಅಲಿಪೋರ್ ನ್ಯಾಯಾಲಯವು ಮಧ್ಯಂತರ ತಡೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 2 ರಂದು ನಡೆಯಲಿದೆ.


ಈ ಹಿಂದೆ ಅಲಿಪೋರ್ ನ್ಯಾಯಾಲಯವು ಶರಣಾಗುವಂತೆ ಶಮಿ ಅವರಿಗೆ ನೀಡಿದ್ದ ನಿರ್ದೇಶನದ  ಬಗ್ಗೆ ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ಪ್ರವಾಸದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಬಿಸಿಸಿಐ, ಈ ಬಗ್ಗೆ ಶಮಿ ಅವರು ತಮ್ಮ ವಕೀಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದೆ. 


"ವೆಸ್ಟ್ ಇಂಡೀಸ್ ಪ್ರವಾಸ ಮುಗಿದ ಬಳಿಕ ಶಮಿ ಯುಎಸ್ ಗೆ ತೆರಳಿದ್ದು, ಸೆಪ್ಟೆಂಬರ್ 12ರಂದು ಭಾರತಕ್ಕೆ ಮರಳಲಿದ್ದಾರೆ. ನ್ಯಾಯಾಲಯದ ವಿಷಯದಲ್ಲಿ ಅವರು ತಮ್ಮ ವಕೀಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ" ಎಂದು ಬಿಸಿಸಿಐ ಕಾರ್ಯಕಾರಿಣಿ ಸುದ್ದಿ ಸಂಸ್ಥೆ ಐಎಎನ್‌ಎಸ್ ಗೆ ಹೇಳಿದೆ.


ಶಮಿ ಮೂಲತಃ ಅಮ್ರೋಹಾದವರಾಗಿದ್ದು, 2018 ರಲ್ಲಿ ಶಮಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಜಹಾನ್ ದೂರು ದಾಖಲಿಸಿದ್ದರು. ಅಲ್ಲದೆ, ಶಮಿ ವಿರುದ್ಧ ಹಲ್ಲೆಯಿಂದ ಹಿಡಿದು ಕೊಲೆ ಯತ್ನದವರೆಗೆ ಹಲವಾರು ಆರೋಪಗಳನ್ನು ಹೊರಿಸಿದ್ದರು. ಆದರೆ, ಈ ಎಲ್ಲಾ ಆರೋಪಗಳನ್ನು ಕ್ರಿಕೆಟಿಗ ಶಮಿ ನಿರಾಕರಿಸಿದ್ದರು.