ನವದೆಹಲಿ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಖಂಡಿತಾ ಜಾಮೀನು ಸಿಗಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಅನ್ನೋದು ಯಾರಿಗೂ ಶಾಶ್ವತ ಅಲ್ಲ. ಕಳೆದ ಐದು ವರ್ಷಗಳಿಂದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕೇಂದ್ರದ ದ್ವೇಷದ ರಾಜಕಾರಣ ಹೊಸತೇನಲ್ಲ ಎಂದು ಹೇಳಿದರು.


ಮುಂದುವರೆದು ಮಾತನಾಡುತ್ತಾ, ತಿಹಾರ್ ಜೈಲಿನಲ್ಲಿರುವ ಡಿಕೆಶಿ ಅವರನ್ನು ಭೇಟಿ ಮಾಡಲೆಂದು ಬಂದಿದ್ದೆ. ಆದರೆ ಜೈಲು ಅಧಿಕಾರಿಗಳು ಪೂರ್ವಾನುಮತಿ ಪಡೆಯದೇ ಭೇಟಿಗೆ ಅವಕಾಶವಿಲ್ಲ ಎಂದು ಹೇಳಿದ್ದರಿಂದ ಭೇಟಿ ಸಾಧ್ಯವಾಗಿಲ್ಲ. ದೇವರಿಗೆ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ಡಿಕೆಶಿ ಅವರಿಗೆ ದೇವರ ದಯೆಯಿಂದ ಒಳ್ಳೆಯದಾಗಲಿದೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು. 


ಇದೇ ವೇಳೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಸಹ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.


ಮನಿ ಲಾಂಡರಿಂಗ್ ಪ್ರಕಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕರ್ನಾಟಕ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಇಂದು ದೆಹಲಿಯ ನ್ಯಾಯಾಲಯ ತೀರ್ಪು ನೀಡಲಿದೆ.