ಕಾವೇರಿ ವಿವಾದ : ಏ.5ರಂದು ತಮಿಳುನಾಡು ಬಂದ್`ಗೆ ಡಿಎಂಕೆ ಕರೆ
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಏಪ್ರಿಲ್ 5 ರಂದು ತಮಿಳುನಾಡು ಬಂದ್ಗೆ ಡಿಎಂಕೆ ನೇತೃತ್ವದ ಸರ್ವಪಕ್ಷ ಸಭೆ ನಿರ್ಧರಿಸಿದೆ.
ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಏಪ್ರಿಲ್ 5 ರಂದು ತಮಿಳುನಾಡು ಬಂದ್ಗೆ ಡಿಎಂಕೆ ನೇತೃತ್ವದ ಸರ್ವಪಕ್ಷ ಸಭೆ ನಿರ್ಧರಿಸಿದೆ.
ಚೆನ್ನೈನಲ್ಲಿ ಇಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವತಿಯಿಂದ ಬಿಜೆಪಿ, ಅಣ್ಣಾ ಡಿಎಂಕೆ ಹೊರತುಪಡಿಸಿ ಸರ್ವಪಕ್ಷಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಏಪ್ರಿಲ್ 5 ರಂದು ತಮಿಳುನಾಡು ಬಂದ್ ಕರೆ ನೀಡಲು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಗಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
ಅಲ್ಲದೆ, ಏಪ್ರಿಲ್ 11ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಲಾಗುವುದು. ಜೊತೆಗೆ ಏಪ್ರಿಲ್ 2 ರಂದು ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಧರಣಿ ಉಪವಾಸ ಕೈಗೊಳ್ಳಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 6 ವಾರದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಫೆ.16ರಂದು ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಆದರೆ ಇದುವರೆಗೂ ಕೇಂದ್ರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.