ಡಿಎಂಕೆ ಅಧಿನಾಯಕನ ಅಂತ್ಯ ಸಂಸ್ಕಾರ ವಿವಾದ: ಬೆಳಿಗ್ಗೆ 8ಕ್ಕೆ ವಿಚಾರಣೆ ಮುಂದೂಡಿಕೆ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್ನಲ್ಲಿ ಅವಕಾಶ ನೀಡಲು ಆದೇಶಿಸುವಂತೆ ಕೋರಿ ಡಿಎಂಕೆ ಮುಖಂಡರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
ಚೆನ್ನೈ: ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದ ಡಿಎಂಕೆ ಅಧಿನಾಯಕ ಎಂ. ಕರುಣಾನಿಧಿ ಅವರ ನಿಧನದ ಬೆನ್ನಲ್ಲೇ, ಅವರ ಅಂತ್ಯಸಂಸ್ಕಾರದ ವಿಚಾರ ವಿವಾದ ಸೃಷ್ಟಿಸಿದೆ.
ನಾಡಿನ ಹಿಂದುಳಿದ ವರ್ಗದ ಏಳಿಗೆಗಾಗಿ ಶ್ರಮಿಸಿದ ನಾಯಕನನ್ನು ಮರೀನಾ ಬೀಚ್ ಬಳಿಯ ಅಣ್ಣ ಮೆಮರಿಯಲ್‌ನಲ್ಲಿ ನಡೆಸಲು ಪುತ್ರ ಸ್ಟಾಲಿನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ಡಿಎಂಕೆ ಹೈಕೋರ್ಟ್ ಮೆಟ್ಟಿಲೇರಿತ್ತು. ಡಿಎಂಕೆಯ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಮಧ್ಯರಾತ್ರಿ ವಿಚಾರಣೆಗೆ ತೆಗೆದುಕೊಂಡಿತ್ತು.
ಮಂಗಳವಾರ ರಾತ್ರಿ ಅರ್ಜಿಯ ವಿಚಾರಣೆ ಆರಂಭಿಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಚ್.ಜಿ. ರಮೇಶ್ ಮತ್ತು ಎಸ್.ಎಸ್. ಸುಂದರ್ ನೇತೃತ್ವದ ಪೀಠವು ಸರ್ಕಾರ ಹಾಗೂ ಡಿಎಂಕೆಯ ವಾದವನ್ನು ಆಲಿಸಿದ ಬಳಿಕ ವಿಚಾರಣೆಯನ್ನು ಬೆಳಗ್ಗೆ 8 ಗಂಟೆಗೆ ಮುಂದೂಡಿದೆ.
ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ ಸಮಾಧಿಯ ಪಕ್ಕದಲ್ಲಿಯೇ ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವಂತೆ ಅವರ ಕುಟುಂಬದವರು ಎಐಎಡಿಎಂಕೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಕಾನೂನಿನ ತೊಡಕಿನ ನೆಪವೊಡ್ಡಿ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ ಅದನ್ನು ನಿರಾಕರಿಸಿದ್ದು, ಗಾಂಧಿ ಮಂಟಪದ ಸಮೀಪ ಎರಡು ಎಕರೆ ಜಾಗ ಮಂಜೂರು ಮಾಡಿದೆ.