ನವದೆಹಲಿ: ಡಿಎಂಕೆ ಪಕ್ಷವು ಈಗ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೇಲ್ಜಾತಿ ಬಡವರಿಗೆ ಶೇ 10 ರಷ್ಟು ಮೀಸಲಾತಿ ನಿರ್ಧಾರವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.


COMMERCIAL BREAK
SCROLL TO CONTINUE READING

ಸಾಮಾನ್ಯ ವಿಭಾಗದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಸಂವಿಧಾನಾತ್ಮಕ ತಿದ್ದುಪಡಿಯನ್ನು ಪ್ರಶ್ನಿಸಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಮತ್ತು ರಾಜ್ಯಸಭೆ ಸಂಸದ ಆರ್.ಎಸ್.ಭಾರತಿ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.


ಈಗ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಶೇ.10 ಮೀಸಲಾತಿ ನಡೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಇದು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಇರುವ ಶೇ 50% ಮೀಸಲಾತಿ ಮಿತಿಗೆ ಹೆಚ್ಚುವರಿಯಾಗಿರುತ್ತದೆ.ಇದರಿಂದ ಒಟ್ಟು ಮೀಸಲಾತಿ ಶೇ 60ರಷ್ಟು ಆಗಲಿದೆ. ಇಂದ್ರಾ ಸಾಹವ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೀಸಲಾತಿ ಪ್ರಮಾಣವೂ ಶೇ.50 ರ ಮೀತಿಯನ್ನು ಮೀರುವ ಹಾಗಿಲ್ಲ ಎಂದು ತೀರ್ಪು ನೀಡಿತ್ತು. 


ಇನ್ನೊಂದೆಡೆ ಈ ಕಾನೂನನ್ನು ತಮಿಳುನಾಡಿನಲ್ಲಿ ಜಾರಿಗೊಳಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ.ಏಕೆಂದರೆ ಈಗಾಗಲೇ ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣವು ಶೇ 69 ಆಗಿದೆ. ಆದ್ದರಿಂದ ಎಐಡಿಎಂಕೆ ಮತ್ತು ಡಿಎಂಕೆ ಎರಡು ಪಕ್ಷಗಳು ಇದನ್ನು ವಿರೋಧಿಸುತ್ತಿವೆ.ಈಗಾಗಲೇ ಎನ್ಜಿಒವೊಂದು ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿ, ಸರ್ಕಾರದ ಈ ನಡೆ ಸುಪ್ರೀಂಕೋರ್ಟ್ ನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿರುವುದರಿಂದ ಈ ಬಿಲ್ ಅನ್ನು ತಿರಸ್ಕರಿಸಬೇಕು ಎಂದು ಹೇಳಿದ್ದಾರೆ.