ಜಾತಿ ತಾರತಮ್ಯ ಪ್ರತಿಪಾದಿಸುವ ಪ್ರಶ್ನೆ ಪತ್ರಿಕೆಗೆ ಸ್ಟಾಲಿನ್ ತೀವ್ರ ಆಕ್ಷೇಪ
ಜಾತಿ ತಾರತಮ್ಯ ಪ್ರತಿಪಾದಿಸುವ ಪ್ರಶ್ನೆ ಪತ್ರಿಕೆಗಳ ಬಗ್ಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಜಾತಿ ತಾರತಮ್ಯ ಪ್ರತಿಪಾದಿಸುವ ಪ್ರಶ್ನೆ ಪತ್ರಿಕೆಗಳ ಬಗ್ಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಪ್ರಶ್ನೆ ಪತ್ರಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸ್ಟಾಲಿನ್ ಅವರು ಟ್ವೀಟ್ ಮಾಡಿದ್ದಾರೆ. ಈಗ ಈ ಪ್ರಶ್ನೆ ಪತ್ರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
'6ನೇ ತರಗತಿಯ ಕೇಂದ್ರ ವಿದ್ಯಾ ಪರೀಕ್ಷೆಯಲ್ಲಿ ಜಾತಿ ತಾರತಮ್ಯ ಮತ್ತು ಕೋಮು ವಿಭಜನೆಯನ್ನು ಪ್ರಚಾರ ಮಾಡುವ ಪ್ರಶ್ನೆಗಳನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಮತ್ತು ಈ ಪ್ರಶ್ನಾವಳಿಯನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿರುವವರನ್ನು ಕಾನೂನಿನ ಸೂಕ್ತ ನಿಬಂಧನೆಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು' ಎಂದು ಆಗ್ರಹಿಸಿದ್ದಾರೆ.
ಈ ವೈರಲ್ ಆಗಿರುವ ಪ್ರಶ್ನೆ ಪತ್ರಿಕೆಯಲ್ಲಿ ದಲಿತ ಎಂದರೇನು? ಎನ್ನುವ ಪ್ರಶ್ನೆಯಲ್ಲಿ, ವಿದೇಶಿಯರು, ಅಸ್ಪೃಶ್ಯರು, ಮಧ್ಯಮ ವರ್ಗ ಹಾಗೂ ಮೇಲ್ವರ್ಗ ಎಂದು ಉತ್ತರಕ್ಕೆ ಆಯ್ಕೆಯನ್ನು ನೀಡಲಾಗಿದೆ. ಇನ್ನೊಂದು ಪ್ರಶ್ನೆಯಲ್ಲಿ ಮುಸ್ಲಿಂರಿಗೆ ಇರುವ ಸಾಮಾನ್ಯ ಹೋಲಿಕೆಗಳೆಂದು ಎಂದು ಕೇಳಿರುವ ಪ್ರಶ್ನೆಗೆ ಉತ್ತರದಲ್ಲಿ 'ಮುಸ್ಲಿಮರು ತಮ್ಮ ಹುಡುಗಿಯರನ್ನು ಶಾಲೆಗೆ ಕಳುಹಿಸುವುದಿಲ್ಲ', 'ಅವರು ಶುದ್ಧ ಸಸ್ಯಾಹಾರಿಗಳು', 'ರೋಜಾ ಸಮಯದಲ್ಲಿ ಅವರು ನಿದ್ರೆ ಮಾಡುವುದಿಲ್ಲ' ಎಂಬ ಆಯ್ಕೆಗಳನ್ನು ನೀಡಲಾಗಿದೆ.
6 ನೇ ತರಗತಿಯ ಸಿಬಿಎಸ್‌ಇ ಪಠ್ಯಕ್ರಮಕ್ಕೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ. ಎಎಂಎಂಕೆ ನಾಯಕ ಟಿಟಿವಿ ದಿನಕರನ್ ಮತ್ತು ಆರ್ಎಸ್ ಸಂಸದ ವೈಕೊ ಕೂಡ ಈ ಪ್ರಶ್ನೆಪತ್ರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.