ನವದೆಹಲಿ: ಕೇರಳದಲ್ಲಿ ಉಂಟಾಗಿರುವ ಭೀಕರ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಈಗಾಗಲೇ ಕೇಂದ್ರ ಸರಕಾರ ಕೇರಳ ಪ್ರವಾಹ ಪರಿಹಾರವಾಗಿ 500 ಕೋಟಿ ರೂ.ಗಳನ್ನೂ ಬಿಡುಗಡೆ ಮಾಡಿರುವುದು ನಿಜಕ್ಕೂ ಸ್ವಾಗತಾರ್ಯ. ಆದರೆ ಈ ಧನ ಸಾಕಾಗುವುದಿಲ್ಲ. ನೀವು ಈ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ್ದೀರಾ? ದಯವಿಟ್ಟು ಕೇರಳ ಜನರನ್ನು ಮತ್ತಷ್ಟು ನರಳುವಂತೆ ಮಾಡಬೇಡಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಹೇಳಿದ್ದರು. 


ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ರಾಜ್ಯ ಗೃಹ ಮಂತ್ರಿ ಕಿರೆಣ್ ರಿಜಿಜು ಅವರು, ವಿಪತ್ತಿನ ಸಮಯದಲ್ಲಿ ರಾಜಕೀಯ ಮಾಡಬಾರದು, ಮಳೆ ಮತ್ತು ಪ್ರವಾಹಕ್ಕಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ, ವಿಪತ್ತಿನ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಕೆಲಸ ಮಾಡಬೇಕು. ದಯವಿಟ್ಟು ರಾಜಕೀಯ ಮಾಡಬೇಡಿ, ನೂರಾರು ರಕ್ಷಣಾ ಪಡೆಗಳು 90 ಕ್ಕೂ ಏರ್ ಕ್ರಾಫ್ಟ್, 500 ಮೋಟಾರ್ ಬೋಟ್ಸ್, ಎನ್ ಡಿ ಆರ್ ಎಫ್, ನೌಕಾದಳ, ಹಾಗೂ ಅರೆ ಸೇನಾ ಪಡೆಗಳು ಪರಿಹಾರ ಕಾರ್ಯಕ್ಕಾಗಿ ತೆರಳಿವೆ ಎಂದು ಟ್ವೀಟ್ ಮಾಡಿದ್ದಾರೆ.


ಕೆಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಇದುವರೆಗೂ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಕೇರಳಕ್ಕೆ ತೆರಳಿ ಪ್ರವಾಹ ಪೀಡಿತ ಪ್ರದೇಶಗಳ ವಯ್ಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಉನ್ನತ ಮಟ್ಟದ ಸಭೆ ನಡೆಸಿ 500 ಕೋಟಿ ರೂ.ಗಳ ಪರಿಹಾರ ಧನ ಘೋಷಿಸಿದ್ದಾರೆ. ಉಳಿದಂತೆ ತಮಿಳುನಾಡು, ಕರ್ನಾಟಕ, ಬಿಹಾರ, ದೆಹಲಿ, ಆಂಧ್ರ ಪ್ರದೇಶ, ತೆಲಂಗಾಣ ಸರ್ಕಾರಗಳು ಹಣಕಾಸಿನ ನೆರವು ಘೋಷಿಸಿವೆ.