Bharat Ratna Dr. Bhim Rao Ambedkar: ಡಾ.ಬಿ.ಆರ್.ಅಂಬೇಡ್ಕರ್... ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ... ದೇಶ ಕಂಡ ಮಹಾನ್ ಚೇತನ ಇವರು. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಇಂತಹ ಮೇರು ವ್ಯಕ್ತಿತ್ವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರದು.


COMMERCIAL BREAK
SCROLL TO CONTINUE READING

14ನೇ ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದ ಡಾ.ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಬರೀ ಕಷ್ಟವನ್ನೇ ಕಂಡಿದ್ದವರು. ಅಸ್ಪೃಶ್ಯತೆ ಎಂಬ ಭೂತ ಬಲವಾಗಿ ಬೇರೂರಿದ್ದ ಆ ಕಾಲದಲ್ಲಿ ಅಂಬೇಡ್ಕರ್ ತುಂಬಾ ನೋವುಂಡಿದ್ದರು. ಇದೇ ನೋವಿನ ಜೀವನ ಬಳಿಕ ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತ್ತು, ಸಾಮಾಜಿಕ ಸಮಾನತೆಯ ಕನಸು ಕಾಣುವಂತೆ ಮಾಡಿತ್ತು. ಹೀಗೆ ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರಾದರು, ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು, ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡರು. ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ. ಈ ಪವಿತ್ರ ಗ್ರಂಥದ ಗಂಧದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಅಂಬೇಡ್ಕರ್‌ರವರ ಜೀವನದಿಂದ ತಿಳಿದುಬರುತ್ತದೆ.


ಬಾಬಾ ಸಾಹೇಬರ ಬಾಲ್ಯ ಹೇಗಿತ್ತು..?


ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಏಪ್ರಿಲ್ 14, 1891ರಂದು ರಾಮ್‌ಜಿ ಮತ್ತು ಭೀಮಬಾಯಿ ದಂಪತಿಗಳ 14ನೇ ಮಗನಾಗಿ ಜನಿಸಿದರು. ಅಂಬೇಡ್ಕರವರ ಮೊದಲ ಹೆಸರು ಭೀಮರಾವ್ ಆಗಿತ್ತು, ಪ್ರಾಥಮಿಕ ಶಿಕ್ಷಣವು ನೋವು ಮತ್ತು ಅವಮಾನಗಳಿಂದ ಕೂಡಿತ್ತು. ಪ್ರಾಥಮಿಕ ಶಿಕ್ಷಣವನ್ನು ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರ್ಕಾರಿ ಪ್ರೌಢ ಶಾಲೆಯಾದ ಎಲಿಫಿನ್‌ಸ್ಟನ್ ಹೈಸ್ಕೂಲಿನಲ್ಲಿ ಅನೇಕ ಕಹಿ ಘಟನೆಗಳ ಮಧ್ಯಯೇ 1907ರಲ್ಲಿ 10ನೇ ತರಗತಿ ಪಾಸಾಗುತ್ತಾರೆ. ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್‌ಸ್ಟನ್ ಸೇರಿದ ಅಂಬೇಡ್ಕರ್‌ರವರು 1912ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ. ನಂತರ 1913ರಲ್ಲಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗೂ ಎಂ.ಎ., ಪಿ.ಎಚ್.ಡಿ. ಪದವಿ ಪಡೆದರು. ನಂತರ ಹೆಚ್ಚಿನ ಉನ್ನತ ವ್ಯಾಸಂಗವನ್ನು ಇಂಗ್ಲೆಂಡಿನಲ್ಲಿ ಮುಗಿಸಿದರು. ತದನಂತರ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಭಾರತಕ್ಕೆ ಬಂದು ವಕೀಲ ವೃತ್ತಿಯನ್ನು ಪ್ರಾರಂಭಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇದೆ ಸಮಯದಲ್ಲಿ ಇವರನ್ನು 1927ರಲ್ಲಿ ಮುಂಬಯಿಯ ಶಾಸಕಾಂಗ ಸದಸ್ಯರಾಗಿ ಬ್ರಿಟನ್ ಸರ್ಕಾರ ನೇಮಿಸುತ್ತದೆ. ಈ ಮೂಲಕ ರಾಜಕೀಯ ಜೀವನಕ್ಕೂ ಕಾಲಿಡುತ್ತಾರೆ.


ಇದನ್ನೂ ಓದಿ: ಸಿದ್ಧನನ್ನು ಬುದ್ಧನಾಗಿಸಿದ ಪ್ರಸಂಗಗಳು


ಹೋರಾಟದ ಹಾದಿ


1927ರಿಂದ 1932ರವರೆಗೆ ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿದ ಅಂಬೇಡ್ಕರ್‌ ಅವರು, ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ-ಬಾವಿಗಳಿಂದ ನೀರು ಸೇದುವ ಹಕ್ಕು, ಮತದಾನದ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ಮಾಡುವ ಮೂಲಕ ಸಮಾನವಾದ ಸಮಾಜ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುತ್ತಾರೆ. ದೇಶದ ಮೊದಲ ಕಾನೂನು ಮಂತ್ರಿಯಾಗಿ ಅನೇಕ ಪ್ರಗತಿಪರ ಕಾರ್ಯಗಳನ್ನು ಕೈಗೊಂಡು ಅದರಲ್ಲಿಯೂ ವಿಶೇಷವಾಗಿ ರಾಜಕೀಯ ಹಾಗೂ ಕಾನೂನು ರಂಗದಲ್ಲೂ ಅತ್ಯುತ್ತಮ ಕೆಲಸ ಮಾಡಿ ದೇಶದ ಜನಸಾಮಾನ್ಯರ ಪ್ರೀತಿ ಸ್ನೇಹ ಸಂಪಾದನೆ ಮಾಡಿದರು.


ಸಂವಿಧಾನದ ಅರ್ಪಣೆ 


ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಗಾಧ ಜ್ಞಾನಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಭಾರತಕ್ಕಲ್ಲದೇ ವಿಶ್ವಕ್ಕೆ ಮಾದರಿ, ಪ್ರೇರಣೆ ಹಾಗೂ ಪ್ರಜಾಪ್ರಭುತ್ವವನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಭಾರತ ಸಂವಿಧಾನ ವಿಶ್ವ ಸರ್ವಶ್ರೇಷ್ಠ ಮಾಹಾಸಂವಿಧಾನ. ದೇಶದಲ್ಲಿ ಇಂದು ರಾಷ್ಟ್ರಪತಿಯಿಂದ ಹಿಡಿದು ಗ್ರಾಮ ಪಂಚಾಯಿತಿ ಸದಸ್ಯರವರೆಗೆ ಆಡಳಿತ ನಡೆಯಲು ಕಾರಣ ನಮ್ಮ ಸಂವಿಧಾನ.


ಇದನ್ನೂ ಓದಿ:  ಗಣಿತ ಲೋಕದ ಗಣಿ ಶ್ರೀನಿವಾಸ ರಾಮಾನುಜನ್; 'ಗಣಿತ ಭಾಸ್ಕರ'ನ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್‌ ಸಂಗತಿಗಳು!!


ಅಂಬೇಡ್ಕರ್‌ ಪುಸ್ತಕ ಪ್ರೀತಿ 


ಅಂಬೇಡ್ಕರ್ ಇಂಗ್ಲೆಂಡಿನಿಂದ ಹಿಂದಿರುಗುವಾಗ 32 ಪೆಟ್ಟಿಗೆ ಪುಸ್ತಕಗಳನ್ನು ತಂದಿದ್ದರು. ಜೊತೆಗೆ ಎಲ್ಲೇ ಹೋದರು ಪುಸ್ತಕ ಖರೀದಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದರು. ಮದ್ಯರಾತ್ರಿವರೆಗೂ ಪುಸ್ತಕ ಓದುತ್ತಿದ್ದರು. ಅವರ ಪುಸ್ತಕ ಪ್ರೇಮ ಇಂದಿನ ಜನಗಳಿಗೆ ಮಾದರಿಯಾಗಬೇಕಲ್ಲವೇ.. ಪ್ರಾಣಿಗಳನ್ನು ಸಾಕುವುದರಲ್ಲಿ ಅಂಬೇಡ್ಕರ್ ನಿಸ್ಸೀಮರು. ಜೊತೆಗೆ ಸಂಗೀತ ಕೇಳುವುದರಲ್ಲಿಯೂ ಆಸಕ್ತಿ ಇವರಿತ್ತು. ಅವರಿಗಿದ್ದ ಜ್ಞಾನದ ಹಂಬಲ ಯುವ ಜನತೆಗೆ ಆಶಾಕಿರಣವಾಗಿದೆ. ತತ್ವ ಮತ್ತು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ 12ನೇ ಶತಮಾನದ ಬಸವಾದಿ ಪ್ರಮಥರು ಹೇಳಿದ ಮಾತನ್ನು ಈ ಸಮಾಜದಲ್ಲಿ ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಕೊಡುಗೆ ಅಪಾರ.


ಅವರ ಸಮ-ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಅನುಕರಿಸುತ್ತಿವೆ ಹಾಗೂ ಅನುಸರಿಸುತ್ತಿವೆ. ಹೀಗಾಗಿ ಈಗ ಸಮಾಜದಲ್ಲಿ ಸ್ವಾತಂತ್ರ‍್ಯ, ಸಮಾನತೆಯ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಅವರು ಕಂಡ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನಾವೆಲ್ಲರೂ ನನಸಾಗಿಸಬಹುದು. ಹಾಗೆ ಅವರ ಜೀವನ ಚರಿತ್ರೆ ಹಾಗೂ ಅವರು ಸಾಗಿಸಿದ ಬದುಕು ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು. ಆ ದಿಸೆಯಲ್ಲಿ ಯುವ ಜನತೆ ಮಾಹಾತ್ಯಾಗ ಮೂರ್ತಿ ಅಂಬೇಡ್ಕರ್‌ ಅವರ ಹಾದಿಯಲ್ಲಿ ಒಂದಿಷ್ಟು ದೂರ ಕ್ರಮಿಸಿದರೆ ದೇಶಕ್ಕೆ, ವಿಶ್ವಕ್ಕೆ ಉತ್ತಮ ಅಲ್ಲದೆ ನಾವೆಲ್ಲರೂ ಸಮೃದ್ಧವಾಗಿ ಜೀವನ ನಡೆಸಲು ಸಾಧ್ಯವಾಗಲಿದೆ.


✍ ಡಾ.ಡಿ.ಸಿ.ರಾಮಚಂದ್ರ, ಲೇಖಕರು ಹಾಗೂ ಉಪನ್ಯಾಸಕರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.