ಪಾಕಿಸ್ತಾನದ ಕರ್ತಾರ್ಪುರ್ ಕಾರಿಡಾರ್ ಉದ್ಘಾಟನೆಗೆ ಹೋಗಲಿರುವ ಮನಮೋಹನ್ ಸಿಂಗ್
ನವೆಂಬರ್ 9 ರಂದು ಐತಿಹಾಸಿಕ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗಾಗಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.
ನವದೆಹಲಿ: ನವೆಂಬರ್ 9 ರಂದು ಐತಿಹಾಸಿಕ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗಾಗಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.
ನವೆಂಬರ್ 9 ರಂದು ಕಾರ್ತಾರ್‌ಪುರ ಗುರುದ್ವಾರಕ್ಕೆ ಹೋಗುವ ಮೊದಲ ಬ್ಯಾಚ್ ಯಾತ್ರಾರ್ಥಿಗಳಿಗೆ ಸೇರಲು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಆಹ್ವಾನವನ್ನು ಮಾಜಿ ಪ್ರಧಾನಿ ಸ್ವೀಕರಿಸಿದ್ದಾರೆ.ಸುಲ್ತಾನಪುರ ಲೋಧಿ ಯಲ್ಲಿ ಭಾರತದ ಕಡೆಯ ಮುಖ್ಯ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಲಿದ್ದಾರೆ. ಡಾ. ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗೆ ಕರ್ತಾರ್ಪುರಕ್ಕೆ ಹೋಗುವ ಮೊದಲ ಬ್ಯಾಚಿನ ಯಾತ್ರಾರ್ಥಿಗಳ ಭಾಗವಾಗಲಿದ್ದಾರೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ರವೀನ್ ಠಕ್ರಾಲ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಪಂಜಾಬ್ ಸಿಎಂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗೆ ಆಹ್ವಾನಿಸಿದ್ದರು. ನವೆಂಬರ್ನಲ್ಲಿ ಗುರುನಾನಕ್ ದೇವ್ ಜಿ ಅವರ 550ನೇ ಪ್ರಕಾಶ್ ಪರ್ವ್ ಆಚರಣೆಯಲ್ಲಿ ಪಾಲ್ಗೊಳ್ಳಲು ಪಂಜಾಬ್ ಸಿಎಂ ಅವರ ಆಹ್ವಾನವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪಿಎಂ ಮೋದಿ ಇಬ್ಬರೂ ಸ್ವೀಕರಿಸಿದ್ದಾರೆ.
ವಿಶೇಷವೆಂದರೆ ಡಾ. ಮನಮೋಹನ್ ಸಿಂಗ್ ಅವರು ತಮ್ಮ ಪ್ರಧಾನ ಮಂತ್ರಿಯ 10 ವರ್ಷಗಳ ಅವಧಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗಾಹ್ನಲ್ಲಿ ಜನಿಸಿದರು, ಆದರೆ ವಿಭಜನೆಯ ನಂತರ ಅವರ ಕುಟುಂಬವು ಅಮೃತಸರಕ್ಕೆ ಸ್ಥಳಾಂತರಗೊಂಡಿತು.