ಹಣ ಗಳಿಕೆಗೆ ಸುವರ್ಣಾವಕಾಶ; ಕೇಂದ್ರ ಸರ್ಕಾರದಿಂದ ಸಿಗಲಿದೆ ಟ್ರೈನಿಂಗ್
ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಸರ್ಕಾರ ಹೊಸ ಪ್ರಯತ್ನವನ್ನು ಪ್ರಾರಂಭಿಸಿದೆ. ಈ ಉಪಕ್ರಮದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ದೇಶದ ಯುವಜನರಿಗೂ ಉದ್ಯೋಗ ಸಿಗಲಿದೆ.
ನವದೆಹಲಿ: ದೇಶದಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯವನ್ನು ತಡೆಯಲು ಸರ್ಕಾರ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.ಈ ಹೊಸ ಪ್ರಯತ್ನದಲ್ಲಿ ದೇಶದಲ್ಲಿ ಮಾಲಿನ್ಯ ಕಡಿಮೆಯಾಗುವುದರ ಜೊತೆ-ಜೊತೆಗೆ ದೇಶದ ಯುವ ಜನತೆಗೆ ಉದ್ಯೋಗವೂ ಸಿಗಲಿದೆ. ವಾಸ್ತವವಾಗಿ, ದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರವನ್ನು ತೆರೆಯಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME) ಈ ಯೋಜನೆಯನ್ನು ಯಶಸ್ವಿಗೊಳಿಸಲು ಯುವ ಜನತೆಗೆ ತರಬೇತಿ ಕೂಡ ನೀಡುತ್ತಿದೆ. ತರಬೇತಿ ಸಮಯದಲ್ಲಿ ಚಾರ್ಜಿಂಗ್ ಸ್ಟೇಷನ್ ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಒದಗಿಸಲಾಗುತ್ತದೆ. ಇದರೊಂದಿಗೆ ಕೆಲಸದ ಹೊಸ ತಂತ್ರವನ್ನೂ ಕಲಿಸಲಾಗುತ್ತದೆ.
ಜನವರಿ 25 ಮತ್ತು 26 ರಂದು ತರಬೇತಿ:
ಎಂಎಸ್ಎಂಇ ಸಚಿವಾಲಯವು ಎರಡು ದಿನಗಳ ತರಬೇತಿ ಶಿಬಿರವನ್ನು ನಡೆಸಲಿದೆ. ಇದೇ ಜನವರಿ 25 ಮತ್ತು ಜನವರಿ 26 ರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು. ಇಲ್ಲಿ ನಿಮಗೆ ಸ್ವಂತ ಚಾರ್ಜಿಂಗ್ ಸ್ಟೇಷನ್ ತೆರೆಯುವ ಬಗ್ಗೆ ತರಬೇತಿ ಸಿಗಲಿದೆ. ಈ ತರಬೇತಿಯನ್ನು ಸದುಪಯೋಗ ಪಡೆಸಿಕೊಳ್ಳುವ ಮೂಲಕ ನೀವು ಸಹ ಚಾರ್ಜಿಂಗ್ ಸ್ಟೇಷನ್ ತೆರೆದು ಉತ್ತಮ ಸಂಪಾದನೆ ಮಾಡಬಹುದಾಗಿದೆ.
ಬೆಳಗ್ಗೆ 10 ಗಂಟೆಯಿಂದ ತರಬೇತಿ ಆರಂಭ:
ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಇನ್ಫ್ರಾಸ್ಟ್ರಕ್ಚರ್ ಅಂಡ್ ಟೆಕ್ನಾಲಜಿ ಅಡಿಯಲ್ಲಿ ಪೂರ್ವ ದೆಹಲಿಯ ಕೈಲಾಶ್‌ನ ಶುಹುಲ್ ಕಂಟೋನ್ಮೆಂಟ್ ನಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 2020ರ ಜನವರಿ 25 ಮತ್ತು 26ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ತರಬೇತಿ ನೀಡಲಾಗುವುದು.
ತರಬೇತಿಯಲ್ಲಿ ಪೂರ್ಣ ಮಾಹಿತಿ:
ಈ ತರಬೇತಿಯಲ್ಲಿ, ಕಾರ್ಯವಿಧಾನಗಳು, ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ತಂತ್ರಜ್ಞಾನ, ಮೂಲಸೌಕರ್ಯ, ವ್ಯವಹಾರ, ಸೌರ ಪಿವಿ ಚಾರ್ಜಿಂಗ್ ಕನೆಕ್ಟಿವಿಟಿ ಲೋಡ್, ವಿದ್ಯುತ್ ಸುಂಕ ಇತ್ಯಾದಿಗಳ ಬಗ್ಗೆ ನಿಮಗೆ ತಿಳಿಸಲಾಗುವುದು. ಈ ತರಬೇತಿಯಲ್ಲಿ, ಈ ವ್ಯವಹಾರದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗುವುದು.
ಸಿಗಲಿದೆ ಪ್ರಮಾಣಪತ್ರ:
ಈ ತರಬೇತಿಗೆ ಹೋಗುವ ಮೊದಲು ನೀವು 100 ರೂ. ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬೇಕು. ಇದರೊಂದಿಗೆ, ಈ ತರಬೇತಿಗಾಗಿ ನೀವು 6,500 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನಿಮಗೆ ಸರ್ಕಾರದಿಂದ ಪ್ರಮಾಣಪತ್ರವನ್ನು ಸಹ ನೀಡಲಾಗುವುದು, ಅದರ ಸಹಾಯದಿಂದ ನೀವು ಸುಲಭವಾಗಿ ಚಾರ್ಜಿಂಗ್ ಕೇಂದ್ರವನ್ನು ತೆರೆಯಬಹುದು.
ತರಬೇತಿಗೆ ತೆರಳುವಾಗ ತಪ್ಪದೇ ಕೊಂಡೊಯ್ಯ ಬೇಕಾದ ದಾಖಲೆಗಳು:
ಈ ತರಬೇತಿಗೆ ಹೋಗುವವರು ತಪ್ಪದೇ ನಿಮ್ಮ ಆಧಾರ್ ಕಾರ್ಡ್ ನಕಲು, ಶೈಕ್ಷಣಿಕ ಅರ್ಹತೆಯ ದಾಖಲೆಗಳು ಮತ್ತು 2 ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ಕೊಂಡೊಯ್ಯಬೇಕು.