ಅರುಣಾಚಲ ಪ್ರದೇಶ್, ಅಸ್ಸಾಂನಲ್ಲಿ 6.1 ತೀವ್ರತೆಯ ಭೂಕಂಪ!
ಈಶಾನ್ಯ ಭಾರತ ಮತ್ತು ಚೈನಾ, ಟಿಬೆಟ್ ಮತ್ತು ಮ್ಯಾನ್ಮಾರ್ ಗಡಿಭಾಗಗಳಲ್ಲಿ ಭೂಕಂಪದ ಅನುಭವವಾಗಿದೆ.
ಗುವಾಹಾಟಿ: ಈಶಾನ್ಯ ಭಾರತ ಮತ್ತು ಚೈನಾ, ಟಿಬೆಟ್ ಮತ್ತು ಮ್ಯಾನ್ಮಾರ್ ಗಡಿಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ಬುಧವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.1 ರಷ್ಟು ಪ್ರಾಥಮಿಕ ಭೂಕಂಪನವು ದಾಖಲಾಗಿದೆ ಎಂದು ಯುಎಸ್ ಜಿಯಾಲಾಜಿಕಲ್ ಸರ್ವೆ (ಯುಎಸ್ಜಿಎಸ್) ತಿಳಿಸಿದೆ.
ಯುಎಸ್ಜಿಎಸ್ ನಂತರ ಪರಿಷ್ಕರಿಸಿದಾಗ 5.9 ತೀವ್ರತೆಯ ಪ್ರಮಾಣ ದಾಖಲಾಗಿದ್ದು, ಡಿಬ್ರುಗಢ್ ನಗರದ ವಾಯವ್ಯ ದಿಕ್ಕಿನಲ್ಲಿ 71 ಮೈಲುಗಳಷ್ಟು (114 ಕಿ.ಮೀ.) ಭೂಕಂಪ ಅಧಿಕೇಂದ್ರವನ್ನು ಗುರುತಿಸಲಾಗಿದ್ದು, ಇದು 5.8 ಮೈಲುಗಳಷ್ಟು (9 ಕಿ.ಮಿ) ಆಳದಲ್ಲಿದೆ ಎನ್ನಲಾಗಿದೆ.
ಭಾರತದ ಹವಾಮಾನ ಇಲಾಖೆಯ ಪ್ರಕಾರ, ಅರುಣಾಚಲ ಪ್ರದೇಶದ ವೆಸ್ಟ್ ಸಿಯಾಂಗ್ನಲ್ಲಿ 5.8-ತೀವ್ರತೆಯ ಭೂಕಂಪವು 1:45 ಗಂಟೆಗೆ ಸಂಭವಿಸಿದೆ. ಇದು 28.6 ° N ಅಕ್ಷಾಂಶ, 94.4 ° W ರೇಖಾಂಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ಟಿಬೆಟ್ನ ಹಲವಾರು ಭಾಗಗಳಲ್ಲಿ ಭೂಕಂಪನವು ಕಂಡುಬಂದಿದೆ ಎಂದು ಚೀನಾದ ಸ್ಟೇಟ್ಸ್ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ. ಭೂಕಂಪದ ವೇಳೆ ಯಾವುದೇ ಆಸ್ತಿ ಅಥವಾ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ.