ಅಜಂ ಖಾನ್, ಮನೇಕಾ ಗಾಂಧಿಗೂ ಚುನಾವಣಾ ಪ್ರಚಾರ ಮಾಡದಂತೆ ಆಯೋಗ ನಿರ್ಬಂಧ
ಎಸ್ಪಿ ನಾಯಕ ಅಜಂ ಖಾನ್ 72 ಗಂಟೆಗಳ ಕಾಲ ಮತ್ತು ಮನೇಕಾ ಗಾಂಧಿ 48 ಗಂಟೆ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಆಯೋಗ ಆದೇಶಿಸಿದೆ.
ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತು ಕೇಂದ್ರ ಸಚಿವೆ ಮನೇಕಾ ಗಾಂಧಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಚುನಾವಣಾ ಆಯೋಗ ನಿಷೇಧಿಸಿದೆ.
ಎಸ್ಪಿ ನಾಯಕ ಅಜಂ ಖಾನ್ 72 ಗಂಟೆಗಳ ಕಾಲ ಮತ್ತು ಮನೇಕಾ ಗಾಂಧಿ 48 ಗಂಟೆ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಆಯೋಗ ಆದೇಶಿಸಿದೆ. ಇದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಜಾರಿಗೆ ಬರಲಿದೆ.
ಸುಲ್ತಾನಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮನೇಕಾ ಗಾಂಧಿ, ನಿಮಗೆ ಕೆಲಸ ಬೇಕಿದ್ದರೆ ನನಗೆ ಮತ ನೀಡಿ ಎಂದು ಮುಸ್ಲಿಂ ಮತದಾರರಿಗೆ ತಾಕೀತು ಮಾಡಿದ್ದರು. ಮತ್ತೊಂದೆಡೆ ರಾಂಪುರ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರು ಖಾಕಿ ಅಂಡರ್ವೇರ್ ಧರಿಸುತ್ತಾರೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳನ್ನು ಪರಿಶೀಲಿಸಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ.
ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 72 ಗಂಟೆ , ಮಾಯಾವತಿ 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿತ್ತು.