ನವದೆಹಲಿ: ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಗುರುವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ಇಂದು ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ಪಿ.ಚಿದಂಬರಂ ಮತ್ತು ಪುತ್ರ ಕಾರ್ತಿ ಚಿದಂಬರಂಗೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯ ಸೆ.5ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದೀಗ ಜಾಮೀನು ರದ್ಧತಿ ಕೋರಿ ಜಾರಿ ನಿರ್ದೇಶನಾಲಯ ಗುರುವಾರ ಅರ್ಜಿ ಸಲ್ಲಿಸಿದ್ದು, ಸಾಕ್ಷ್ಯ ಹಾಳು ಮಾಡುವ ಸಾಧ್ಯತೆಯಿದೆ ಎಂದು ಆರೋಪಿಸಿದೆ. ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿರುವ ಇದೇ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಇವರಿಬ್ಬರಿಗೆ ಈ ಮೊದಲೇ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.


ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಅವರನ್ನು ಆಗಸ್ಟ್ 21ರಂದು ಸಿಬಿಐ ಬಂಧಿಸಿದ ಬಳಿಕ ನ್ಯಾಯಾಂಗ ಬಂಧನದಲ್ಲಿರುವ ಚಿದಂಬರಂ, ತಿಹಾರ್ ಜೈಲಿನಲ್ಲಿದ್ದಾರೆ. 


ಏರ್ಸೆಲ್-ಮ್ಯಾಕ್ಸಿಸ್ ಹಗರಣ ಸುಮಾರು 3500 ಕೋಟಿ ಒಪ್ಪಂದವಾಗಿದೆ ಎಂದು ಜಾರಿ ನಿರ್ದೇಶನಾಲಯದ ವಾದಿಸಿದ್ದು, ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ  ತನಿಖೆ ನಡೆಸುತ್ತಿದೆ.