ನವದೆಹಲಿ: ಕೇಂದ್ರ ಹೊರಡಿಸಿರುವ ಪರಿಸರ ಪ್ರಭಾವದ ಮೌಲ್ಯಮಾಪನ ಅಧಿಸೂಚನೆಯು (ಪರಿಸರ ಪರಿಣಾಮದ ಮೌಲ್ಯಮಾಪನ ಅಧಿಸೂಚನೆ 2020) ಈ ಸರ್ಕಾರದ ಮತ್ತೊಂದು ಜನ ವಿರೋಧಿ ನಡೆಯಾಗಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ (BV Srinivas) ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಯುವ ಕಾಂಗ್ರೆಸ್ (Youth Congress) ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್  ಅವರು, ಈಗಾಗಲೇ ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳಿ ಯುವಜನರ ಉದ್ಯೋಗವನ್ನು ಕಸಿದುಕೊಂಡಿದೆ. ಈಗ ಕೇಂದ್ರ ಸರ್ಕಾರವು ತನ್ನ ಸೂಟ್-ಬೂಟ್ ಸ್ನೇಹಿತರ ಅನುಕೂಲಕ್ಕಾಗಿ ಪರಿಸರಕ್ಕೆ ಮಾರಕವಾಗಿರುವ ಪರಿಸರ ಪ್ರಭಾವದ ಮೌಲ್ಯಮಾಪನ ಅಧಿಸೂಚನೆಯನ್ನು ಹೊರಡಿಸಿದೆ. ಇದು ಜನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿಯೂ ಆಗಿದೆ ಎಂದಿದ್ದಾರೆ.


ಯೂತ್ ಕಾಂಗ್ರೆಸ್ ವತಿಯಿಂದ 'ಕೆಲಸ ನೀಡಿ' ಅಭಿಯಾನ


 "ಇಐಎ 2020ರ ಕರಡಿನ ಮೂಲಕ ಭಾರತದ ಪರಿಸರ, ಜೀವವೈವಿಧ್ಯ, ಪರಿಸರ ವಿಜ್ಞಾನ, ಪ್ರಾಣಿ, ಸಸ್ಯ, ಬಡ ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಜನರು ಮತ್ತು ಭವಿಷ್ಯದ ಪೀಳಿಗೆಗೆ ಅಪಾಯವನ್ನುಂಟು ಮಾಡಲು ಸಂಚು ರೂಪಿಸಲಾಗಿದೆ" ಎಂದು ಶ್ರೀನಿವಾಸ್ ಹೇಳಿದ್ದಾರೆ. 


ಕೇಂದ್ರ ಸರ್ಕಾರದ ಹೊಸ ಪರಿಸರ ಪ್ರಭಾವದ ಮೌಲ್ಯಮಾಪನ ಅಧಿಸೂಚನೆಯು 'ಪರಿಹಾರ ಕೊಟ್ಟು ಪರಿಸರ ಮಾಲಿನ್ಯ ಮಾಡಿ' ಎಂಬ ರೀತಿ ಇದೆ. ಈ ಮೂಲಕ ತನ್ನ ಸೂಟ್-ಬೂಟ್ ಸ್ನೇಹಿತರಿಗೆ ಬಿಜೆಪಿ ಸರ್ಕಾರವು ದೇಶದ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಮುಕ್ತ ಲೂಟಿ ಮಾಡಲು ಮಾರ್ಗವನ್ನು ಸಿದ್ಧಪಡಿಸಿಕೊಡುತ್ತಿದೆ. ಇಂಥ ಅವಕಾಶ ನೀಡುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಲೂಟಿಯನ್ನು ಉತ್ತೇಜಿಸುತ್ತಿದೆ ಎಂದು ಶ್ರೀನಿವಾಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


"ಮೋದಿ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯಿಲ್ಲ. ಆದ್ದರಿಂದ ಈ ಉದ್ದೇಶಿತ ಕರಡಿನಲ್ಲಿ ಸಾರ್ವಜನಿಕ ಸಮಾಲೋಚನೆಯನ್ನು ಅನೌಪಚಾರಿಕಗೊಳಿಸಲಾಗಿದೆ".  ಸೂಟ್ ಬೂಟ್ ಎನ್ನುವುದು ಮೋದಿ ಸರ್ಕಾರದ ನೀತಿಯಾಗಿದ್ದು, ಇದರ ಮೂಲಕ ಭಾರತದ ಜನರ ಜೀವನ, ಜೀವನೋಪಾಯ, ಶುದ್ಧ ಗಾಳಿ, ಶುದ್ಧ ನೀರನ್ನು ಕಸಿದುಕೊಳ್ಳಲಾಗುತ್ತಿದೆ.  ಈ ನೀತಿಯ ದೂರಗಾಮಿ ಪರಿಣಾಮಗಳು ಭವಿಷ್ಯದ ಪೀಳಿಗೆಗೆ ಪ್ರತಿಕೂಲವಾಗಿ ಪರಿಣಮಿಸುತ್ತವೆ.  ಇದಲ್ಲದೆ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಕೊಲ್ಲುವ ಮೂಲಕ ರಾಜ್ಯಗಳಲ್ಲಿ ಪರಿಸರ ಪ್ರಭಾವದ ಅಧಿಕಾರಿಗಳನ್ನು ನಿರಂಕುಶಾಧಿಕಾರದಲ್ಲಿ ನೇಮಿಸುವ ಹಕ್ಕನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳುತ್ತಿದೆ ಎಂದು ಶ್ರೀನಿವಾಸ್ ಕಿಡಿಕಾರಿದ್ದಾರೆ.


ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕನ್ನಡಿಗ ಬಿ.ವಿ. ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ

"ಇಐಎ 2020ರ ಕರಡನ್ನು ನೋಡಿದಾಗ ಕೇಂದ್ರದಲ್ಲಿರುವ ಮೋದಿ ಸರ್ಕಾರವು ಕೈಗಾರಿಕೋದ್ಯಮಿ ಸ್ನೇಹಿತರ ಲಾಭದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆಯೇ ಹೊರತು ಪರಿಸರ ಮತ್ತು ಪರಿಸರ ವಿಜ್ಞಾನದ ಬಗ್ಗೆ ಅಲ್ಲ ಎಂಬುದು ಗೊತ್ತಾಗುತ್ತದೆ. 40 ರೀತಿಯ ಯೋಜನೆಗಳನ್ನು ಪರಿಸರ ಪರಿಣಾಮದ ಮೌಲ್ಯಮಾಪನದಿಂದ ಹೊರಗಿಡಲಾಗಿದೆ.  ಈ ನೀತಿಯು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಈ ಕರಡು ಸಂಸತ್ತಿನಲ್ಲಿ ಚರ್ಚೆಯಾಗಬೇಕು. ಆದರೆ ಕೇಂದ್ರ ಸರ್ಕಾರ ಇದನ್ನು ಸಾರ್ವಜನಿಕ ಚರ್ಚೆಗೆ ತರುವುದನ್ನು ನಿರಂತರವಾಗಿ ತಪ್ಪಿಸುತ್ತಿದೆ.  ಸಂಸದೀಯ ಸಂಪ್ರದಾಯಗಳಲ್ಲಿ ಮೋದಿ ಸರ್ಕಾರಕ್ಕೆ ನಂಬಿಕೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ" ಎಂದು ಶ್ರೀನಿವಾಸ್ ಹೇಳಿದ್ದಾರೆ.


ಭಾರತದ ಜನಸಂಖ್ಯೆಯ 14 ಪ್ರತಿಶತ ಕರಾವಳಿ ಜಿಲ್ಲೆಗಳಲ್ಲಿ ವಾಸಿಸುತ್ತಿದೆ. ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗವು ಬಡತನ ರೇಖೆಗಿಂತ ಕೆಳಗಿದೆ ಮತ್ತು ಸಮುದ್ರ ಮಟ್ಟ ಏರಿಕೆ, ಹೆಚ್ಚಿನ ತಾಪಮಾನ ಮತ್ತು ಹವಾಮಾನ ಅನಿರೀಕ್ಷಿತ ಘಟನೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಅಂಶಗಳನ್ನು ಪರಿಸರ ಪ್ರಭಾವದ ಮೌಲ್ಯಮಾಪನ ಅಧಿಸೂಚನೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ಅಧಿಸೂಚನೆಯನ್ನು ಕೆಲವೇ ಕೆಲವರ ಲಾಭಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.