ಮಹಾರಾಷ್ಟ್ರ: ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ಆಯ್ಕೆ
ಏಕನಾಥ ಶಿಂಧೆ ಅವರ ಹೆಸರನ್ನು ಆದಿತ್ಯ ಠಾಕ್ರೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ನವದೆಹಲಿ: ಶಿವಸೇನೆ ಗುರುವಾರ ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದೆ. ಅವರ ಹೆಸರನ್ನು ಆದಿತ್ಯ ಠಾಕ್ರೆ ಪ್ರಸ್ತಾಪಿಸಿದರು ಎಂದು ಹೇಳಲಾಗಿದೆ.
ಶಿಂಧೆ ಪ್ರಸ್ತುತ ಮಹಾರಾಷ್ಟ್ರ ಸರ್ಕಾರದಲ್ಲಿ ಪಿಡಬ್ಲ್ಯೂಡಿ ಸಚಿವರಾಗಿದ್ದಾರೆ. ಅವರು ಥಾಣೆಯ ಕೊಪ್ರಿ-ಪಚ್ಪಖಾಡಿ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿದ್ದಾರೆ. 2004, 2009 ಮತ್ತು 2014 ರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸತತವಾಗಿ ಮೂರು ಅವಧಿಗೆ ಆಯ್ಕೆಯಾಗಿರುವ ಶಿಂಧೆ ಅವರನ್ನು ಎರಡನೇ ಬಾರಿಗೆ ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಕ ಮಾಡಿದೆ.
ಶೀಘ್ರದಲ್ಲೇ ಏಕನಾಥ್ ಶಿಂಧೆ, ಆದಿತ್ಯ ಠಾಕ್ರೆ ಮತ್ತು ಇತರ ಶಿವಸೇನೆ ಮುಖಂಡರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ರಾಜ್ ಭವನದಲ್ಲಿ ಭೇಟಿಯಾಗಲಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ 56 ಸ್ಥಾನಗಳನ್ನು ಗೆದ್ದಿದೆ. 106 ಸ್ಥಾನಗಳನ್ನು ಗಳಿಸುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಶಿವಸೇನೆ ಮೈತ್ರಿ ಹೊಂದಿದೆ. ಏತನ್ಮಧ್ಯೆ, ಮಹಾರಾಷ್ಟ್ರದಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಶಿವಸೇನೆ ನಡುವೆ ವೈಮನಸ್ಯ ಮೂಡಿದ್ದು, ಇದು ರಾಜ್ಯದಲ್ಲಿ ಸರ್ಕಾರ ರಚನೆ ವಿಳಂಬವಾಗಲು ಕಾರಣವಾಗಿದೆ.