ಮೋದಿ ಕಲ್ಪನೆಯ `ಒಂದು ರಾಷ್ಟ್ರ` ಒಂದು ಚುನಾವಣೆ`ಗೆ ಬ್ರೇಕ್ ಹಾಕಿದ ಚುನಾವಣಾ ಆಯೋಗ
ಏಕಕಾಲಕ್ಕೆ ಲೋಕಸಭೆ ಚುನಾವಣೆಯ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಸುವ ಸಾಧ್ಯತೆ ಇಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.
ನವದೆಹಲಿ: ಏಕಕಾಲಕ್ಕೆ ಲೋಕಸಭೆ ಚುನಾವಣೆಯ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಸುವ ಸಾಧ್ಯತೆ ಇಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.
ಆ ಮೂಲಕ ಇತ್ತೀಚಿಗೆ ಏಕಕಾಲಕ್ಕೆ ಈ ವಿಚಾರವಾಗಿ ಎದ್ದಿರುವ ಊಹಾಪೋಹಗಳಿಗೆ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರು ತೆರೆ ಎಳೆದಿದ್ದಾರೆ.ಇಂದು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ತಿಳಿಸಿದ ಅವರು "ಕಾನೂನು ಚೌಕಟ್ಟು" ಇಲ್ಲದೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ "ಒಂದು ರಾಷ್ಟ್ರದ ಒಂದು ಚುನಾವಣೆ" ಕಲ್ಪನೆಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಅವರು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದರು. ಎಂಟು ಪುಟಗಳ ಪತ್ರದಲ್ಲಿ ಬಿಜೆಪಿ ಮುಖ್ಯಸ್ಥ, ಏಕಕಾಲಿಕ ಚುನಾವಣೆಗೆ ವ್ಯಕ್ತವಾಗುತಿರುವ ವಿರೋಧವು ರಾಜಕೀಯವಾಗಿ ಪ್ರೇರಿತವಾಗಿದೆ ಎಂದು ತಿಳಿಸಿದ್ದರು.
"ಕಾನೂನನ್ನು ಜಾರಿಗೆ ತರಲು ಕನಿಷ್ಠ ಒಂದು ವರ್ಷ ಬೇಕಾಗಬಹುದು.ಈ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ.ಸಂವಿಧಾನವನ್ನು ತಿದ್ದುಪಡಿ ಮಾಡಲು ಮಸೂದೆ ಸಿದ್ಧವಾದಾಗ, ಈ ವಿಚಾರಕ್ಕೆ ಚಾಲನೆ ದೊರಕಬಹುದು" ಎಂದು ರಾವತ್ ಹೇಳಿದರು.
ಇದೇ ಸಂದರ್ಭದಲ್ಲಿ ಮುಂದುವರೆದು ಮಾತನಾಡಿದ ಅವರು "ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ 14 ತಿಂಗಳುಗಳ ಮುಂಚಿಯೇ ಮತದಾನಕ್ಕೆ ಸಿದ್ಧತೆಗಳನ್ನು ಆರಂಭಿಸುತ್ತದೆ ಎಂದರು. "ಆಯೋಗವು ಕೇವಲ 400 ಸಿಬ್ಬಂದಿ ಸಾಮರ್ಥ್ಯವನ್ನು ಹೊಂದಿದೆ ಆದರೆ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯದ ಮೇಲೆ 1.11 ಕೋಟಿ ಜನರನ್ನು ನಿಯೋಜಿಸುತ್ತದೆ ಎಂದು ಅವರು ತಿಳಿಸಿದರು.
ಈ ಮೋದಿ ಸರ್ಕಾರದ ಒಂದು ರಾಷ್ಟ್ರ ಒಂದು ಚುನಾವಣೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.