ಕುಷ್ಟರೋಗ ಪೀಡಿತರಿಗಾಗಿ ಶ್ರಮಿಸಿದ್ದ ಪದ್ಮಶ್ರೀ ದಾಮೋದರ್ ಬಾಪತ್ ಇನ್ನಿಲ್ಲ
ಕುಷ್ಠರೋಗಿಗಳ ಚಿಕಿತ್ಸೆ ಮತ್ತು ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾಜ ಸೇವಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದಾಮೋದರ್ ಗಣೇಶ್ ಬಾಪತ್ ಅವರು ಛತ್ತೀಸ್ ಗಡ್ ದ ಬಿಲಾಸ್ಪುರ ಜಿಲ್ಲೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ನವದೆಹಲಿ: ಕುಷ್ಠರೋಗಿಗಳ ಚಿಕಿತ್ಸೆ ಮತ್ತು ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾಜ ಸೇವಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದಾಮೋದರ್ ಗಣೇಶ್ ಬಾಪತ್ ಅವರು ಛತ್ತೀಸ್ ಗಡ್ ದ ಬಿಲಾಸ್ಪುರ ಜಿಲ್ಲೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಅಧಿಕಾರಿಗಳು ಹೇಳುವಂತೆ ಮಿದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಪತ್ ಅವರನ್ನು ಕಳೆದ ತಿಂಗಳು ಬಿಲಾಸ್ಪುರದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರು ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕೂವರೆ ದಶಕಗಳಿಂದ ರಾಜ್ಯದ ಜಂಜಗೀರ್-ಚಂಪಾ ಜಿಲ್ಲೆಯ ಸೋತಿ ಗ್ರಾಮದಲ್ಲಿ ಭಾರತೀಯ ಕುಷ್ಟ ನಿವಾರಕ್ ಸಂಘ (ಬಿಕೆಎನ್ಎಸ್) ನಡೆಸುತ್ತಿದ್ದ ಆಶ್ರಮದಲ್ಲಿ ಕುಷ್ಠರೋಗಿಗಳ ಚಿಕಿತ್ಸೆ ಮತ್ತು ಸೇವೆಗಾಗಿ ಬಾಪತ್ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಆಶ್ರಮದ ಕೆಲಸಗಾರ ದೀಪಕ್ ಕುಮಾರ್ ಕಹ್ರಾ ಹೇಳಿದರು.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಜನಿಸಿದ ಬಾಪತ್, ತಂದೆಯ ನಿಧನದ ನಂತರ 1970 ರಲ್ಲಿ ಛತ್ತೀಸ್‌ಗಡದ ಜಶ್‌ಪುರಕ್ಕೆ (ಈಗಿನ ಜಿಲ್ಲೆ) ಸ್ಥಳಾಂತರಗೊಂಡರು ಮತ್ತು ಆರ್‌ಎಸ್‌ಎಸ್ ಸಂಯೋಜಿತ ವನ್ವಾಸಿ ಕಲ್ಯಾಣ್ ಆಶ್ರಮದೊಂದಿಗೆ ಸಂಬಂಧ ಹೊಂದಿದ್ದರು.1972 ರಲ್ಲಿ, ಚಂಪಾದಲ್ಲಿ ಬಿಕೆಎನ್ಎಸ್ ಮೂಲಕ ಕುಷ್ಠರೋಗ ಕ್ಷೇತ್ರದಲ್ಲಿ ಡಾ.ಸಾದಶಿವ್ ಕಟ್ರೆ ಅವರ ಕೆಲಸದಿಂದ ಪ್ರಭಾವಿತರಾದ ಬಾಪತ್ ಆಶ್ರಮಕ್ಕೆ ಸೇರಿದರು ಮತ್ತು ಅಂದಿನಿಂದ ಅವರು ಅದರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಬಾಪತ್ ಅವರಿಗೆ 2018 ರಲ್ಲಿ ರಾಷ್ಟ್ರಪತಿರಾಮ್ ನಾಥ್ ಕೋವಿಂದ್ ಅವರು ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿದರು.