ಶೋಪಿಯಾನ್ ನಲ್ಲಿ ಮುಂದುವರೆದ ಉಗ್ರರ ಉಪಟಳ
ಶೋಪಿಯನ್ ಜಿಲ್ಲೆಯ ಮೀಮಂಡರ್ ಪ್ರದೇಶದಲ್ಲಿ ಸೈನ್ಯ ಮತ್ತು ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸ ವೇಳೆ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ಮುಂದುವರೆದಿದೆ.
ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಶೋಪಿಯನ್ ಜಿಲ್ಲೆಯ ಮೀಮಂಡರ್ ಪ್ರದೇಶದಲ್ಲಿ ಸೈನ್ಯ ಮತ್ತು ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದರು. ಈ ವೇಳೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಭದ್ರತಾ ಪಡೆಯಿಂದ ಕೂಡ ಪ್ರತಿದಾಳಿ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಸೇನೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಏರ್ ಫೋರ್ಸ್ ಬೃಹತ್ ವಾಯುದಾಳಿಗಳನ್ನು ನಡೆಸಿದ ನಂತರ, ಈ ದಾಳಿ ನಡೆದಿದೆ. ಐಎಎಫ್ ಮಂಗಳವಾರ ಜೈಶ್-ಎ-ಮೊಹಮ್ಮದ್ನ ತರಬೇತಿ ಶಿಬಿರಗಳಲ್ಲಿ ಮತ್ತು ಆಲ್ಫಾ 3 ನಿಯಂತ್ರಣ ಕೊಠಡಿಗಳಲ್ಲಿ 1000-ಕೆಜಿ ಬಾಂಬ್ ದಾಳಿ ನಡೆಸಿತು.
ಭಾರತೀಯ ವಾಯುಪಡೆಯ ಯುದ್ಧ ವಿಮಾನ ಮಿರಾಜ್ 2000 ಎಲ್ಒಸಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿದ್ದ ಉಗ್ರಗಾಮಿ ಶಿಬಿರವನ್ನು ಗುರಿಯಾಗಿರಿಸಿ ಬಾಲಾಕೋಟ್, ಮುಜಫರಾಬಾದ್ ಮತ್ತು ಚಕೋಟಿಗಳಲ್ಲಿ ಬಾಂಬ್ ದಾಳಿ ನಡೆಸಿತು.
ಮತ್ತೊಂದು ಆತ್ಮಾಹುತಿ ದಾಳಿಗೆ ತರಬೇತಿ ನಡೆಸುತ್ತಿದ್ದ ಜೈಶ್ ಉಗ್ರ ಸಂಘಟನೆಯ ಅಡಗುತಾಣವಾಗಿದ್ದ ಬಾಲಾಕೋಟ್‌ನ ಉಗ್ರರ ಕ್ಯಾಂಪ್‌ನ ಮೇಲೆ ವಾಯು ಸೇನೆ ದಾಳಿ ನಡೆಸಿದ್ದು, ಬಾಲಕೋಟ್ ಜೈಶ್ ಎ ಮೊಹಮ್ಮದ್ ಕ್ಯಾಂಪ್ ಸಂಪೂರ್ಣವಾಗಿ ಧ್ವಂಸವಾಗಿದೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.