ಅಹ್ಮದಾಬಾದ್: ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರದಿಂದ ಕಣಕ್ಕಿಳಿದಿರುವ ಅಮಿತ್ ಶಾ ಇಂದು ಈ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಪೂರ್ಣ ಕಾಶ್ಮೀರ ನಮ್ಮದು ಎಂಬ ಘೋಷಣೆ ಕೂಗುವಂತೆ ಜನರನ್ನು ಕೇಳಿದರು.


COMMERCIAL BREAK
SCROLL TO CONTINUE READING

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಆರ್ಟಿಕಲ್ 370 ರ ಇತ್ತೀಚಿನ ಹೇಳಿಕೆಯನ್ನು ಟೀಕಿಸುವ ವೇಳೆ ಅಮಿತ್ ಶಾ ಪೂರ್ಣ ಕಾಶ್ಮೀರ ನಮ್ಮದು ಎಂಬ ಘೋಷಣೆ ಕೂಗುವಂತೆ ಹೇಳಿದ್ದಾರೆ.


ಜನಸಂಘದ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿಯವರ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಬೆಳಿಗ್ಗೆ ಸುಮಾರು 9 ಗಂಟೆಗೆ ಈ ರೋಡ್ ಶೋ ಪ್ರಾರಂಭವಾಯಿತು. ಈ ವೇಳೆ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಶಾ, 'ಕಾಶ್ಮೀರ ನಮ್ಮದು, ಪೂರ್ಣ ಕಾಶ್ಮೀರ ನಮ್ಮದು' ಎಂಬ ಘೋಷಣೆಯನ್ನು ಹೇಳುವಂತೆ ತಿಳಿಸಿದರು.


ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜಿತು ವಾಘನಿ ಅವರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಅಮಿತ್ ಶಾ, ಅಹಮದಾಬಾದ್ ನ ಗಾಂಧಿನಗರ ಕ್ಷೇತ್ರಕ್ಕೆ ಒಳಪಡುವ ಹಲವು ಪ್ರದೇಶಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.


ಅಮಿತ್ ಶಾ ಅವರ ಮೊದಲ ಲೋಕಸಭಾ ಚುನಾವಣೆ:
ಗುಜರಾತ್ ರಾಜ್ಯಸಭಾ ಸದಸ್ಯರಾಗಿರುವ ಅಮಿತ್ ಶಾ, ಶನಿವಾರ ರಾತ್ರಿ ತಮ್ಮ ಕ್ಷೇತ್ರದ ಭೋಪಾಲ್ ಪ್ರದೇಶದ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಅಮಿತ್ ಶಾ ಅವರ ಮೊದಲ ಲೋಕಸಭಾ ಚುನಾವಣೆಯಾಗಿದ್ದು, 1998 ರಿಂದಲೂ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಸಂಸದೀಯ ಕ್ಷೇತ್ರವಾಗಿರುವ ಗಾಂಧಿನಗರದಿಂದ ಈ ಬಾರಿ ಶಾ ಕಣಕ್ಕಿಳಿದಿದ್ದಾರೆ.


ಹಣಕಾಸು ಸಚಿವ ಅರುಣ್ ಜೇಟ್ಲಿ, ಗೃಹ ಸಚಿವ ರಾಜ್ನಾಥ್ ಸಿಂಗ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ವಿಜಯ್ ರುಪಾನಿಯ ಉಪಸ್ಥಿತಿಯಲ್ಲಿ ಬಿಜೆಪಿ ಅಧ್ಯಕ್ಷ ಶನಿವಾರ ನಾಮಪತ್ರ ಸಲ್ಲಿಸಿದ್ದರು.