ಮತ ಯಂತ್ರಗಳಿಗೆ ಬ್ಲೂಟೂತ್ ಜೋಡಣೆ, ಕಾಂಗ್ರೆಸ್ ನಾಯಕ ಆರೋಪ
ಪೋರ್ಬಂದರ್: ಗುಜರಾತ್ನಲ್ಲಿ ನಡೆಯುತ್ತಿರುವ ವಿಧಾನ ಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಿಗೆ (ಇವಿಎಂ) ಬ್ಲೂಟೂತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅರ್ಜುನ್ ಮೊಧ್ವಾಡಿಯಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಇಲ್ಲಿನ ಅವರು ಮೂರು ಇ.ವಿ.ಎಂ ಗಳಿಗೆ ಬ್ಲೂಟೂತ್ ಲಿಂಕ್ ಮಾಡಲಾಗಿರುವ ಬಗ್ಗೆ ಸ್ಕ್ರೀನ್ ಶಾಟ್ ತೆಗೆದು ಚುನಾವಣಾ ಆಯೋಗಕ್ಕೆ ಕಳುಹಿಸುವ ಮೂಲಕ ಅವರು ದೂರು ನೀಡಿದರು.
ಈ ಹಿನ್ನೆಲೆಯಲ್ಲಿ ಪೋರ್ಬಂದರ್ನ ಥಕ್ಕರ್ ಪ್ಲಾಟ್ ಮತದಾನ ಕೇಂದ್ರಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸ್ಪಷ್ಟನೆ ನೀಡಿದ ಇವಿಎಂ ಎಂಜಿನಿಯರ್ ಎಸ್. ಆನಂದ್ ''ನಿಮ್ಮ ಬ್ಲೂಟೂತ್ ಸಾಧನವನ್ನು ಮತ್ತೊಂದು ಸಾಧನದೊಂದಿಗೆ ಜೋಡಿಸಿದಾಗ ನೀವು ನಿಮ್ಮ ಬ್ಲೂಟೂತ್ ಸಾಧನಕ್ಕೆ ನೀಡುವ ಹೆಸರು ತೋರಿಸುತ್ತದೆ ಅಷ್ಟೆ'' ಎಂದು ತಿಳಿಸಿದರು.
ಭಾವನಗರ ಜಿಲ್ಲಾಧಿಕಾರಿ ಹರ್ಷದ್ ಪಟೇಲ್ ಮಾತನಾಡಿ, "ಮತದಾನ ಯಂತ್ರಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ, ದೋಷಪೂರಿತ ಇವಿಎಂ ಗಳನ್ನೂ ಬದಲಾಯಿಸಲಾಗಿದ್ದು, ಮತದಾನ ಶಾಂತಿಯುತವಾಗಿ ನಡೆಯುತ್ತಿದೆ" ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪತ್ರ, ''ಇ.ವಿ.ಎಂಗಳಲ್ಲಿ ದೋಷವಿದೆ ಎಂದು ಕಾಂಗ್ರೆಸ್ನ ಸದಸ್ಯರು ಹೇಳುತ್ತಿದ್ದಾರೆ. ಇದಕ್ಕೆ ಚುನಾವಣಾ ಆಯೋಗ ಕೂಡ ಸ್ಪಂದಿಸಿದೆ. ಆದರೆ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ತಾವು ಸೋಲುತ್ತೇವೆಂಬ ಭಯ ಇರುವುದರಿಂದ ಫಲಿತಾಂಶಕ್ಕೆ ಮುಂಚಿತವಾಗಿಯೇ ಕಾರಣಗಳನ್ನು ಹುಡುಕುತ್ತಿದೆ'' ಎಂದು ಟೀಕಿಸಿದ್ದಾರೆ.