NRCಯಲ್ಲಿ ಹೆಸರಿಲ್ಲದವರನ್ನು ವಿದೇಶಿಯರು ಎನ್ನಲು ಸಾಧ್ಯವಿಲ್ಲ: ಗೃಹ ಸಚಿವಾಲಯ
ಎಲ್ಲಾ ಭಾರತೀಯರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಕಷ್ಟು ಅವಕಾಶಗಳನ್ನು ನೀಡಲಾಗುವುದು.
ನವದೆಹಲಿ: NRC ಡ್ರಾಫ್ಟ್ ನಲ್ಲಿ ಹೆಸರನ್ನು ಹೊಂದಿಲ್ಲದವರನ್ನು ವಿದೇಶಿಯರು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಇಂತಹ ಅಧಿಕಾರ ನ್ಯಾಯಾಂಗಕ್ಕೆ ಮಾತ್ರ ಇರುವುದು ಎಂದು ತಿಳಿಸಿರುವ ಅವರು ಯಾವುದೇ ವ್ಯಕ್ತಿ ಕಾನೂನು ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಹೋಗಬಹುದು ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ(NRC) ಅನ್ನು ನವೀಕರಿಸುವ ಕಾರ್ಯವನ್ನು 'ಜಾತ್ಯತೀತ' ವಿಧಾನದಲ್ಲಿ ಮಾಡಲಾಗುತ್ತಿದೆ. ಎಲ್ಲಾ ಭಾರತೀಯರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಕಷ್ಟು ಅವಕಾಶಗಳನ್ನು ನೀಡಲಾಗುವುದು. ಯಾವುದೇ ವಿಶೇಷ ಸಮುದಾಯವನ್ನು ಗುರಿಪಡಿಸಲಾಗಿಲ್ಲ ಎಂದು ಅಧಿಕಾರಿ ಹೇಳಿದರು.
NRC ರಾಜ್ಯ ನಾಗರೀಕರ ಪಟ್ಟಿ ಎಂದು ಹೇಳಿರುವ ಅಧಿಕಾರಿ, ಅದರಲ್ಲಿ ಹೆಸರಿಲ್ಲ ಎಂಬುದರ ಅರ್ಥ ಅವರು ವಿದೇಶಿಯರು ಎಂದಲ್ಲ. ವಿದೇಶಿ ನಾಗರಿಕ ಎಂದು ಘೋಷಿಸುವ ಹಕ್ಕು ಆ ಉದ್ದೇಶಕ್ಕಾಗಿಯೇ ರಚಿಸಲಾದ ವಿದೇಶಿ ನ್ಯಾಯಮಂಡಳಿಗಿದೆ ಎಂದು ವಿವರಿಸಿದರು. NRC ಅಧಿಕಾರಿಗಳಿಂದ ದೊರೆಯುವ ಅವಕಾಶಗಳನ್ನು ಬಳಸಿದ ಬಳಿಕವೂ ಅವರಿಗೆ ನ್ಯಾಯ ಸಿಗದಿದ್ದಲ್ಲಿ ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ಅಧಿಕಾರಿ ತಿಳಿಸಿದರು.
NRC ಪ್ರಕ್ರಿಯೆಯು ಅರ್ಜಿಯ ಮೇಲೆ ಆಧಾರಿತವಾಗಿದೆ. ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸದಿದ್ದಲ್ಲಿ ಅವರು ಎಷ್ಟೇ ಪ್ರತಿಷ್ಠಿತ ವ್ಯಕ್ತಿಯಾಗಿದ್ದರೂ, ಪಟ್ಟಿಯಲ್ಲಿ ಅವರ ಹೆಸರಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಏತನ್ಮಧ್ಯೆ, ಅಸ್ಸಾಂ ನಲ್ಲಿ ಇಂಟರ್ನೆಟ್ ಸೇವೆ ಸರಿಯಾಗಿ ಕಾರ್ಯನಿರ್ವಹಿಸದ ವರದಿಯನ್ನು ಗೃಹ ಸಚಿವಾಲಯ ತಳ್ಳಿಹಾಕಿದ್ದು, ಮುಖ್ಯ ಕಾರ್ಯದರ್ಶಿ ಮತ್ತು ಡೈರೆಕ್ಟರ್ ಜನರಲ್ ಆಫ್ ಪೋಲಿಸ್ ಈಗಾಗಲೇ ದೂರಸಂಪರ್ಕ ಮತ್ತು ಅಂತರ್ಜಾಲ ಸೇವೆಗಳು ರಾಜ್ಯದಲ್ಲಿ ನಿರ್ಧಾರಿತ ರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅಸ್ಸಾಂನ ಯಾವುದೇ ಇಲಾಖೆಯಲ್ಲಿ ಸೇವೆಯಲ್ಲಿ ತೊಂದರೆಯುಂಟಾಗಿರುವ ಬಗ್ಗೆ ಸುದ್ದಿ ಇಲ್ಲ ಎಂದು ತಿಳಿಸಿದ್ದಾರೆ.
ಅತ್ಯಂತ ನಿರೀಕ್ಷಿತ ಹಾಗೂ ವಿವಾದಿತ ಪಟ್ಟಿಯಿಂದ 40.07 ಲಕ್ಷ ಜನರು ಹೊರಗುಳಿದಿದ್ದಾರೆ. ಒಟ್ಟು 3,29,91,384 ಜನರ ಪೈಕಿ ಕೇವಲ 2,89,83,677 ಜನರ ಹೆಸರು ಕಾಣಿಸಿಕೊಂಡಿದೆ.
ಏತನ್ಮಧ್ಯೆ, ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಎನ್‌ಆರ್‌ಸಿ ಡ್ರಾಫ್ಟ್ಗಾಗಿ ಹಕ್ಕು ಮತ್ತು ಆಕ್ಷೇಪಣೆ ಪ್ರಕ್ರಿಯೆ ಆಗಸ್ಟ್ 30 ರಂದು ಪ್ರಾರಂಭವಾಗಲಿದೆ ಮತ್ತು ಒಂದು ತಿಂಗಳ ಕಾಲ ಮುಂದುವರಿಯುತ್ತದೆ. ಅಗತ್ಯವಿದ್ದರೆ, ಪ್ರಕ್ರಿಯೆಯನ್ನು ಒಂದು ಅಥವಾ ಎರಡು ತಿಂಗಳು ವಿಸ್ತರಿಸಲಾಗುವುದು ಎಂದು ಹೇಳಿದರು.