Exclusive: ಮಮತಾ ಬ್ಯಾನರ್ಜಿ ನಡುವೆ ಇರುವ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ನನ್ನನ್ನು ಒಬ್ಬ ನಾಯಕನಾಗಿ ಒಪ್ಪುವುದಿಲ್ಲ ಎಂದರೆ ಅದು ಸರಿ. ಆದರೆ ದೇಶದ ಪ್ರಧಾನಿಯನ್ನು ಒಪ್ಪುವುದಿಲ್ಲ ಎಂದು ಹೇಳುವುದು ಸಂವಿಧಾನಕ್ಕೇ ಅವಮಾನ ಮಾಡಿದಂತೆ ಎಂದು ಮೋದಿ ಹೇಳಿದರು.
ನವದೆಹಲಿ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಿಂದ ನನಗೆ ಸಮಸ್ಯೆಯಾಗುವುದಿರಲಿ, ಅವರಿಂದ ಪಶ್ಚಿಮ ಬಂಗಾಳ ವಿನಾಶದ ಅಂಚಿನಲ್ಲಿದೆ. ಅವರ ಆಲೋಚನೆ ಇಡೀ ದೇಶಕ್ಕೇ ಮಾರಕವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಲೋಕಸಭಾ ಚುನಾವಣೆ 2019 ಫಲಿತಾಂಶಕ್ಕೆ ಇನ್ನೆರಡೇ ವಾರ ಇರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಝೀ ನ್ಯೂಸ್ ವಾಹಿನಿಗೆ ವಿಶೇಷ ಸಂದರ್ಶನ ನೀಡಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಇರುವ ಸಮಸ್ಯೆಯೇನು? ಎಂದು ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, " ಮಮತಾ ಬ್ಯಾನರ್ಜಿ ಜೊತೆ ಸಮಸ್ಯೆ ವಿಚಾರದಲ್ಲಿ ನನ್ನನ್ನು ಬಿಡಿ, ಮಮತಾ ಬ್ಯಾನರ್ಜಿ ಅವರೊಂದಿಗೆ ಎಷ್ಟು ಜನ ಕೆಲಸಮಾಡಿದ್ದಾರೆ ಎಂಬುದನ್ನು ನೋಡಿ. ಮಮತಾ ಬ್ಯಾನರ್ಜಿ ಪಾಕಿಸ್ತಾನದ ಪ್ರಧಾನಿಯನ್ನು ಪ್ರಧಾನಿ ಎನ್ನುತ್ತಾರೆ. ಆದರೆ ಭಾರತದ ಪ್ರಧಾನಿಯನ್ನು ಪ್ರಧಾನಿ ಎಂದು ಒಪ್ಪುವುದಿಲ್ಲ ಎನ್ನುತ್ತಾರೆ. ನನ್ನನ್ನು ಒಬ್ಬ ನಾಯಕನಾಗಿ ಒಪ್ಪುವುದಿಲ್ಲ ಎಂದರೆ ಅದು ಸರಿ. ಆದರೆ ದೇಶದ ಪ್ರಧಾನಿಯನ್ನು ಒಪ್ಪುವುದಿಲ್ಲ ಎಂದು ಹೇಳುವುದು ಸಂವಿಧಾನಕ್ಕೇ ಅವಮಾನ ಮಾಡಿದಂತೆ ಎಂದು ಮೋದಿ ಹೇಳಿದರು.
ಮುಂದುವರೆದು ಮಾತನಾಡುತ್ತಾ, "ಪಶ್ಚಿಮ ಬಂಗಾಳದಲ್ಲಿ ನಾನು ಚುನಾವಣಾ ರ್ಯಾಲಿ ನಡೆಸಲು ಅನುಮತಿ ನೀಡುವುದಿಲ್ಲ. ನಾವು ಚುನಾವಣಾ ಆಯೋಗದ ಮೊರೆ ಹೋಗಿ ರಾತ್ರಿ 9 ಗಂಟೆಯಲ್ಲಿ ಅನುಮತಿ ಪಡೆಯಬೇಕಾದ ಸಂದರ್ಭ ಎದುರಾಯಿತು. ನಮ್ಮ ಸಮಾವೇಶಗಳಿಗೆ ಶಾಮಿಯಾನ ಕುರ್ಚಿಗಳನ್ನು ನೀಡದಂತೆ ಅಲ್ಲಿನ ಜನರಿಗೆ ತಾಕಿತು ಮಾಡುತ್ತಾರೆ. ಹೀಗಾಗಿ ನಮ್ಮ ಕಾರ್ಯಕರ್ತರು 300 ಕಿ.ಮೀ. ದೂರದಿಂದ ಉಪಕರಣಗಳನ್ನು ತರುವ ಸಮಸ್ಯೆ ಎದುರಾಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ತಡೆ ಒಡ್ಡುತ್ತಾರೆ. ಇಲ್ಲಿ ಪ್ರಶ್ನೆ ಪ್ರಧಾನಿ ಅಥವಾ ಮಮತಾ ಬ್ಯಾನರ್ಜಿ ಅಲ್ಲ. ಬಂಗಾಳದ ಅಭಿವೃದ್ಧಿಗೆ ದೊಡ್ಡ ಅಪಾಯವಾಗಿದೆ. ಅವರ ಚಿಂತನೆಯು ಇಡೀ ದೇಶಕ್ಕೆ ಮಾರಕವಾಗಿದೆ" ಎಂದು ಮೋದಿ ಹೇಳಿದರು.