ಚೆನ್ನೈ: ತಮಿಳುನಾಡಿನ ಕಾಂಚೀಪುರಂನಲ್ಲಿ ದೇವಾಲಯವೊಂದರ ಬಳಿ ನಿಗೂಢ ಸ್ಫೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಭಾನುವಾರ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಕಾಂಚೀಪುರಂನ ತಿರುಪೊರೂರಿನ ಮನಮತಿ ಗ್ರಾಮದ ಗಂಗೈ ಅಮ್ಮನ್ ದೇವಸ್ಥಾನದಲ್ಲಿ ಭಾನುವಾರ ಸಂಜೆ ಈ ಸ್ಫೋಟ ಸಂಭವಿಸಿದೆ. 


ಇತ್ತೀಚೆಗೆ ದೇವಾಲಯವನ್ನು ಸ್ವಚ್ಛಗೊಳಿಸಲಾಗಿದ್ದು, ಕೆಲವು ವಸ್ತುಗಳನ್ನು ಬಿಸಾಡಲಾಗಿದೆ ಎಂದು ಕಾಂಚೀಪುರಂ ಪೊಲೀಸರು ತಿಳಿಸಿದ್ದಾರೆ. ದೇವಾಲಯದಿಂದ ಬಿಸಾಡಲಾಗಿದ್ದ ಕೆಲವು ತ್ಯಾಜ್ಯ ವಸ್ತುಗಳ ಮಧ್ಯೆ ನಿಗೂಢ ವಸ್ತುವನ್ನು ಕಂಡು ಅದನ್ನು ಪರಿಶೀಲಿಸಲು ಕೆಲ ಮಂದಿ ಮುಂದೆ ಹೋಗಿದ್ದಾರೆ. ಅದನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಿದ ನಂತರ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದು ಯಾವ ರೀತಿಯ ಸ್ಫೋಟಕ ಸಾಧನ ಎಂದು ಕಂಡುಹಿಡಿಯಲು ಬಾಂಬ್ ಸ್ಕ್ವಾಡ್ ತನಿಖೆ ನಡೆಸುತ್ತಿದೆ ಎಂದು ಐಎಎನ್ಎಸ್ ವರದಿ ಮಾಡಿದೆ. "ಮನಂಪತಿಯಲ್ಲಿ ದೇವಾಲಯದ ಬಳಿ ಕಾರ್ಮಿಕರು ಅಪರಿಚಿತ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅವರು ತೆರೆಯಲು ಪ್ರಯತ್ನಿಸಿದಾಗ ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ ಕೆ. ಸೂರ್ಯ ಎಂಬ ಯುವಕ ಸೇರಿದಂತೆ ಮತ್ತೋರ್ವ ವ್ಯಕ್ತಿ ಮೃತ ಪಟ್ಟಿದ್ದಾರೆ. ನಾಲ್ವರು ಗಾಯಗೊಂಡರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.


ಆದಾಗ್ಯೂ, ರಾಜ್ಯದಲ್ಲಿ ಆರು ಲಷ್ಕರ್-ಎ-ತೈಬಾ ಭಯೋತ್ಪಾದಕರ ಪ್ರವೇಶಕ್ಕೂ, ಭಾನುವಾರದ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಅಧಿಕಾರಿ ಸ್ಪಷ್ಟ ಪಡಿಸಿದ್ದಾರೆ.


"ಸ್ಫೋಟದ ಬಗ್ಗೆ ಕೇಳಿದಾಗ ನಾವು ಮೊದಲಿಗೆ ಆಘಾತಕ್ಕೊಳಗಾಗಿದ್ದೇವೆ, ಆದರೆ ಇಲ್ಲಿಗೆ ಬಂದಾಗ, ಇದು ವಿಭಿನ್ನ ರೀತಿಯ ಸ್ಫೋಟ ಎಂದು ಸ್ಪಷ್ಟವಾಯಿತು" ಎಂದು ಪೊಲೀಸ್ ಅಧಿಕಾರಿ ಹೇಳಿದರು.


ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.