ಸ್ಫೋಟಕ ಒಳನೋಟಗಳು: ಕೇಂದ್ರ ಸರ್ಕಾರದೊಳಗಿನ ಬಿರುಕು ಬಯಲು ಮಾಡಿದ ಟ್ವಿಟರ್ ಮಾಜಿ ಸಿಇಒ!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಟೀಕಾಕಾರ ಖಾತೆಗಳನ್ನು ಮುಚ್ಚಿ ಹಾಕದಿದ್ದರೆ ಟ್ವಿಟರ್ ಅನ್ನು ಭಾರತದಲ್ಲಿ ನಿಷೇಧಿಸುತ್ತೇವೆ ಎಂದು ಹೇಳಿರುವ ಆರೋಪವನ್ನು ಭಾರತ ಮಂಗಳವಾರ ಅಲ್ಲಗಳೆದಿದೆ.ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಭಾರತ, ಟ್ವಿಟರ್ ಬಳಿ ಜಗತ್ತಿನ ಬೇರೆ ಯಾವುದೇ ರಾಷ್ಟ್ರಕ್ಕಿಂತ ಹೆಚ್ಚು ವಿಚಾರಗಳನ್ನು ತೆಗೆದು ಹಾಕುವಂತೆ ಸೂಚಿಸುತ್ತದೆ. ಸಾಮಾನ್ಯವಾಗಿ ಭಾರತೀಯ ಅಧಿಕಾರಿಗಳು ಸೂಚಿಸಿದಂತೆ ಟ್ವಿಟರ್ ನಡೆದುಕೊಳ್ಳುತ್ತದೆ.
ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸಿ ಅವರು ರೈತರ ಪ್ರತಿಭಟನೆಯ ವೇಳೆ ಅವರ ಪರ ವಿಚಾರಧಾರೆ ಹೊಂದಿದ್ದ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವ ಆದೇಶವನ್ನು ಪಾಲಿಸದಿದ್ದರೆ, ಟ್ವಿಟರ್ ಸಂಸ್ಥೆಯನ್ನೇ ಭಾರತದಲ್ಲಿ ಮುಚ್ಚಲಾಗುವುದು ಎಂದು ಭಾರತ ಸರ್ಕಾರ ಹೇಳಿತ್ತು ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ ಸರ್ಕಾರ ಈ ಆರೋಪವನ್ನು ಶುದ್ಧ ಸುಳ್ಳು ಎಂದಿದೆ.ಟ್ವಿಟರ್ ಸಿಇಒ ಸ್ಥಾನದಿಂದ 2021ರಲ್ಲಿ ಕೆಳಗಿಳಿದ ಡಾರ್ಸಿ ಅವರು ಸೋಮವಾರದಂದು ಮಾತನಾಡುತ್ತಾ, ಒಂದು ವೇಳೆ ಟ್ವಿಟರ್ ಸರ್ಕಾರ ಸೂಚಿಸಿದ ನಿರ್ದಿಷ್ಟ ಟ್ವೀಟ್‌ಗಳನ್ನು ತೆಗೆದು ಹಾಕದಿದ್ದರೆ ಸಂಸ್ಥೆಯ ಉದ್ಯೋಗಿಗಳ ಮನೆ ಮೇಲೆ ದಾಳಿ ನಡೆಸಲಾಗುವುದು ಎಂದು ಭಾರತ ಸರ್ಕಾರ ಬೆದರಿಕೆ ಒಡ್ಡಿತ್ತು ಎಂದಿದ್ದರು.
"ಭಾರತ ಸರ್ಕಾರ ನಾವು ಭಾರತದಲ್ಲಿ ಟ್ವಿಟರ್ ಸಂಸ್ಥೆಯನ್ನು ಮುಚ್ಚುವಂತೆ ಮಾಡುತ್ತೇವೆ ಎಂದಿತ್ತು. ಭಾರತ ನಮಗೆ ಬಹುದೊಡ್ಡ ಮಾರುಕಟ್ಟೆಯಾಗಿದೆ. ಅದೂ ಸಾಲದೆಂಬಂತೆ, ಟ್ವಿಟರ್ ಉದ್ಯೋಗಿಗಳ ಮನೆ ಮೇಲೆ ದಾಳಿ ನಡೆಸಲಾಗುತ್ತದೆ ಎನ್ನಲಾಗಿತ್ತು. ಸರ್ಕಾರ ಅಂತೆಯೇ ನಡೆದುಕೊಂಡಿತು. ಇದು ಭಾರತ, ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ!" ಎಂದು ಜಾಕ್ ಡಾರ್ಸಿ ಬ್ರೇಕಿಂಗ್ ಪಾಯಿಂಟ್ಸ್ ಎಂಬ ಯೂಟ್ಯೂಬ್ ನ್ಯೂಸ್ ಶೋನ ಸಂದರ್ಶನದಲ್ಲಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಜಾಕ್ ಡಾರ್ಸಿ ಅವರು ಆಡಿರುವ ಮಾತುಗಳು ಶುದ್ಧ ಸುಳ್ಳು ಎಂದಿದ್ದಾರೆ."ಯಾರನ್ನೂ ಜೈಲಿಗೆ ಕಳುಹಿಸಲಾಗಿಲ್ಲ ಮತ್ತು ಭಾರತದಲ್ಲಿ ಟ್ವಿಟರ್ ಸಂಸ್ಥೆಯನ್ನು ಮುಚ್ಚಲಾಗಿಲ್ಲ. ಡಾರ್ಸಿ ಅವರ ನೇತೃತ್ವದ ಟ್ವಿಟರ್ ಭಾರತದ ಕಾನೂನುಗಳನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ" ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮೂಲಕ ಹೇಳಿದ್ದಾರೆ.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದಲ್ಲಿ ವಿದೇಶೀ ತಂತ್ರಜ್ಞಾನ ಸಂಸ್ಥೆಗಳು ವ್ಯವಹಾರ ನಡೆಸುವುದು ಕಷ್ಟಕರ ಎಂಬ ಮಾತು ಈಗ ಡಾರ್ಸಿ ಮಾತಿನಿಂದ ಮತ್ತೆ ಮುನ್ನಲೆಗೆ ಬಂದಿದೆ. ಕೇಂದ್ರ ಸರ್ಕಾರ ಸಾಕಷ್ಟು ಬಾರಿ ಭಾರತ ವಿರೋಧಿ ವಿಚಾರಗಳನ್ನು ತಮ್ಮ ವೇದಿಕೆಗಳಿಂದ ತೆಗೆಯಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗೂಗಲ್, ಫೇಸ್‌ಬುಕ್, ಹಾಗೂ ಟ್ವಿಟರ್‌ಗಳನ್ನು ಟೀಕಿಸಿದೆ.
ಭಾರತದಲ್ಲಿ ಕಚೇರಿಗಳನ್ನು ಹೊಂದಿರುವ ವಿದೇಶೀ ಸಂಸ್ಥೆಗಳು ಸಾರ್ವಜನಿಕವಾಗಿ ಭಾರತ ಸರ್ಕಾರವನ್ನು ಟೀಕಿಸುವುದು ಅತ್ಯಂತ ಅಪರೂಪದ ವಿದ್ಯಮಾನವಾಗಿರುವುದರಿಂದ ಟ್ವಿಟರ್ ಮಾಜಿ ಸಿಇಓ ಮಾತುಗಳು ಹೆಚ್ಚಿನ ಗಮನ ಸೆಳೆದವು. ಕಳೆದ ವರ್ಷ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಶವೋಮಿ ಸಂಸ್ಥೆ ಭಾರತದ ಹಣಕಾಸು ಅಪರಾಧ ಸಂಸ್ಥೆ 'ದೈಹಿಕ ಹಲ್ಲೆ' ಮತ್ತು ಬಲವಂತದ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿತ್ತು. ಆದರೆ ಈ ಆರೋಪವನ್ನು ಸರ್ಕಾರಿ ಸಂಸ್ಥೆ ಅಲ್ಲಗಳೆದಿತ್ತು.
ಹಲವು ಉನ್ನತ ಮಟ್ಟದ ಭಾರತೀಯ ಅಧಿಕಾರಿಗಳು ಡಾರ್ಸಿ ಹೇಳಿಕೆಯ ಬಳಿಕ ಮಾತಿನ ದಾಳಿ ನಡೆಸಿ, ಟ್ವಿಟರ್ ಈ ಹಿಂದೆ ಹೇಗೆ ತಪ್ಪು ಮಾಹಿತಿಗಳನ್ನು ಹರಡಿತ್ತು ಎಂದಿದ್ದಾರೆ. ಆದರೆ ವಿರೋಧ ಪಕ್ಷಗಳ ನಾಯಕರು ಸರ್ಕಾರ 2020-21ರ ರೈತರ ಹೋರಾಟದ ಸಂದರ್ಭದಲ್ಲಿ ಹೋರಾಟ ಪರ ಅಭಿಪ್ರಾಯಗಳನ್ನು ಸರ್ಕಾರ ದಮನಿಸಿದೆ ಎಂದಿವೆ. ಆ ಹೋರಾಟ ಮೋದಿ ಆಡಳಿತಕ್ಕೆ ಅತಿಹೆಚ್ಚು ತಲೆನೋವು ಕೊಟ್ಟ ಹೋರಾಟವಾಗಿತ್ತು.ಅಂತಿಮವಾಗಿ ಸರ್ಕಾರ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು, ರೈತರಿಗೆ ಅಸಮಾಧಾನ ಉಂಟುಮಾಡಿದ್ದ ಮಸೂದೆಗಳನ್ನು ಹಿಂದಕ್ಕೆ ಪಡೆಯಿತು.
"ಈ ವಿಚಾರದಿಂದ ಭಾರತದಲ್ಲಿ ಯಾರೇ ಧೈರ್ಯ ತೋರಲು ಪ್ರಯತ್ನಿಸಿದರೂ ಅವರನ್ನು ತಡೆಯಲಾಗುತ್ತದೆ ಎಂದು ತಿಳಿದುಬರುತ್ತದೆ" ಎಂದು ವಿರೋಧ ಪಕ್ಷ ಕಾಂಗ್ರೆಸ್ಸಿನ ವಕ್ತಾರರಾದ ಸುಪ್ರಿಯಾ ಶ್ರಿನಾತೆ ಅಭಿಪ್ರಾಯ ಪಟ್ಟಿದ್ದಾರೆ.ಈ ಸಂದರ್ಶನದಲ್ಲಿ ಡಾರ್ಸಿ ಅವರು ಟರ್ಕಿ ಹಾಗೂ ನೈಜೀರಿಯಾ ಸರ್ಕಾರಗಳೂ ಕಳೆದ ವರ್ಷಗಳಲ್ಲಿ ಟ್ವಿಟರ್ ಅನ್ನು ನಿಷೇಧಿಸಿದ್ದರ ಕುರಿತು ಮಾತನಾಡಿದ್ದರು. ಕ್ರಮೇಣ ಆ ನಿಷೇಧವನ್ನು ತೆರವುಗೊಳಿಸಲಾಯಿತು.ಕಳೆದ ವರ್ಷ ಟ್ವಿಟರ್ ತನ್ನ ಹೇಳಿಕೆಯಲ್ಲಿ, ಟ್ವಿಟರ್ ನಲ್ಲಿನ ಅಂಶಗಳನ್ನು ತೆಗೆದುಹಾಕುವಂತೆ ಹೇಳಿದ ರಾಷ್ಟ್ರಗಳ ಸಾಲಿನಲ್ಲಿ ಜಪಾನ್, ರಷ್ಯಾ ಹಾಗೂ ಟರ್ಕಿಗಳ ನಂತರ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂದಿತ್ತು.ಕಳೆದ ವರ್ಷ ಇಲಾನ್ ಮಸ್ಕ್ 44 ಬಿಲಿಯನ್ ಡಾಲರ್ ಪಾವತಿಸಿ ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ್ದರು.
ಸಚಿವ ರಾಜೀವ್ ಚಂದ್ರಶೇಖರ್ ಅವರು ಡಾರ್ಸಿ ಹಾಗೂ ಅವರ ಟ್ವಿಟರ್ ತಂಡ ಭಾರತೀಯ ಕಾನೂನನ್ನು ಹಲವು ಬಾರಿ ಮುರಿದಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಮಸ್ಕ್ ಅವರ ಹೆಸರನ್ನು ಹೇಳದೆಯೇ, ಜೂನ್ 2022ರ ಬಳಿಕ ಟ್ವಿಟರ್ ಭಾರತೀಯ ಕಾನೂನು, ನಿಯಮಾವಳಿಗಳನ್ನು ಪಾಲಿಸುತ್ತಿದೆ ಎಂದಿದ್ದಾರೆ.
-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.