ಭಾರತದಲ್ಲಿ ತನ್ನ ಹೊಸ ವೈಶಿಷ್ಟ್ಯ ಪರಿಚಯಿಸಿದ Facebook
ಇನ್ಮುಂದೆ ಫೇಸ್ಬುಕ್ ನ ಭಾರತೀಯ ಬಳಕೆದಾರರು ತಮ್ಮ ಪ್ರೊಫೈಲ್‌ಗಳನ್ನು ಸಂಪೂರ್ಣವಾಗಿ ಲಾಕ್ ಮಾಡಬಹುದು. ಇದರಿಂದ ಅವರ ಸ್ನೇಹಿತರು ಮಾತ್ರ ಅವರ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ನೋಡಬಹುದು.
ನವದೆಹಲಿ:ಇನ್ಮುಂದೆ ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರು ತಮ್ಮ ಪ್ರೊಫೈಲ್‌ಗಳನ್ನು ಸಂಪೂರ್ಣವಾಗಿ ಲಾಕ್ ಮಾಡಬಹುದು ಇದರಿಂದ ಅವರ ಸ್ನೇಹಿತರು ಮಾತ್ರ ಅವರ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ನೋಡಬಹುದು. ಇದಕ್ಕೆ ಸಂಬಂಧಿಸಿದಂತೆ ಗುರುವಾರ ಹೇಳಿಕೆ ಪ್ರಕಟಿಸಿರುವ ಫೇಸ್ಬುಕ್, ತನ್ನ ಪ್ರೋಫೈಲ್ ಅನ್ನು ಸಂಪೂರ್ಣ ಲಾಕ್ ಮಾಡುವ ಈ ವೈಶಿಷ್ಟ್ಯವನ್ನು ಭಾರತೀಯ ಬಳಕೆದಾರರಿಗಾಗಿ ಸಿದ್ಧಪಡಿಸಲಾಗಿದ್ದು, ಅದರಲ್ಲೂ ವಿಶೇಷವಾಗಿ ಫೇಸ್ ಬುಕ್ ನಲ್ಲಿ ತನ್ನ ಅನುಭವವನ್ನು ಹೆಚ್ಚು ಕಂಟ್ರೋಲ್ ಮಾಡಲು ಬಯಸುವ ಮಹಿಳೆಯರಿಗಾಗಿ ಇದನ್ನು ಸಿದ್ಧಪಡಿಸಲಾಗಿದೆ ಎಂದಿದೆ. ಪ್ರಸ್ತುತ ಫೇಸ್ ಬುಕ್ ನಲ್ಲಿ ಪ್ರೊಫೈಲ್ ಪಿಕ್ಚರ್ ಗಾರ್ಡ್ ನೀಡಲಾಗಿದ್ದು, ಈಗ ಒದಗಿಸಿರುವ ನೂತನ ವೈಶಿಷ್ಟ್ಯದಿಂದ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬುದರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಲಿದ್ದಾರೆ.
ಫೇಸ್ ಬುಕ್ ಪ್ರಕಾರ, ಒಂದು ಬಾರಿ ಈ ವೈಶಿಷ್ಟ್ಯವನ್ನು ಸಕ್ರೀಯಗೊಳಿಸಿ ಬಳಕೆದಾರರು ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿರುವ ಹಲವು ಪ್ರೈವೆಸಿ ಸೆಟ್ಟಿಂಗ್ ಹಾಗೂ ಹಲವು ಹೊಸ ವೈಶಿಷ್ಟ್ಯಗಳನ್ನು ಒಂದೇ ಒಂದು ಸಿಂಪಲ್ ಸ್ಟೆಪ್ ಮೂಲಕ ಅಪ್ಲೈ ಮಾಡಬಹುದಾಗಿದೆ ಎನ್ನಲಾಗಿದೆ.
ಇದರಿಂದ ಏನಾಗಲಿದೆ?
ಫೇಸ್ ಬುಕ್ ನ ಈ ಹೊಸ ವೈಶಿಷ್ಟ್ಯದಿಂದ ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ ಫುಲ್ ಸೈಜ್ ಪ್ರೊಫೈಲ್ ಭಾವಚಿತ್ರ ಹಾಗೂ ಕವರ್ ಫೋಟೋಗಳನ್ನೂ ಜೂಮ್ ಮಾಡುವುದು ಸಾಧ್ಯವಾಗುದಿಲ್ಲ. ಅಷ್ಟೇ ಅಲ್ಲ ಅವುಗಳನ್ನು ಶೇರ್ ಹಾಗೂ ಡೌನ್ ಲೋಡ್ ಕೂಡ ಮಾಡಲಾಗುವುದಿಲ್ಲ. ಇದಕ್ಕೂ ಮೊದಲು ಈ ರೀತಿ ಮಾಡಲು ಅವಕಾಶ ಇತ್ತು. ಆದರೆ, ಇದೀಗ ಅವರು ನಿಮ್ಮ ಟೈಮ್ ಲೈನ್ ನಲ್ಲಿರುವ ಪೋಸ್ಟ್ ಹಾಗೂ ಫೋಟೋಗಳನ್ನೂ ಕೂಡ ನೋಡಲು ಸಾಧ್ಯವಿಲ್ಲ. ಇದರಲ್ಲಿ ನಿಮ್ಮ ಹಳೆ ಅಥವಾ ಹೊಸ ಫೋಟೋಗಳು ಕೂಡ ಶಾಮೀಲಾಗಿವೆ. ಇದರೊಂದಿಗೆ ನಿಮ್ಮ ಪ್ರೊಫೈಲ್ ಲಾಕ್ ಆಗಿದೆ ಎಂಬುದನ್ನು ಸೂಚಿಸಲು ಫೇಸ್ ಬುಕ್ ನಿಮ್ಮ ಪ್ರೊಫೈಲ್ ಪುಟಕ್ಕೆ ಸೂಚಕವನ್ನು ಸಹ ಸೇರಿಸಲಿದೆ.
ಫೇಸ್ ಬುಕ್ ಫ್ರೋಫೈಲ್ ಅನ್ನು ಹೇಗೆ ಲಾಕ್ ಮಾಡಬೇಕು?
ನಿಮ್ಮ ಫೇಸ್ ಬುಕ್ ಪ್ರೊಫೈಲ್ ಅನ್ನು ಲಾಕ್ ಮಾಡಲು ಮೊದಲು ನಿಮ್ಮ ಹೆಸರಿನ ಕೆಳಗೆ ನೀಡಲಾಗಿರುವ More ಆಪ್ಶನ್ ಮೇಲೆ ಕ್ಲಿಕ್ಕಿಸಬೇಕು. ಬಳಿಕ ಲಾಕ್ ಪ್ರೊಫೈಲ್ ಮೇಲೆ ಕ್ಲಿಕ್ಕಿಸಿ. ನಂತರ Lock Your Profile ಆಪ್ಶನ್ ಮೇಲೆ ಎರಡನೇ ಬಾರಿಗೆ ಕ್ಲಿಕ್ಕಿಸಿ ದೃಢಪಡಿಸಬೇಕು.
ಫೇಸ್ ಬುಕ್ ನಲ್ಲಿ ನಿಮ್ಮ ಪ್ರೊಫೈಲ್ ಲಾಕ್ ಅದ ಬಳಿಕ ನೀವು ಯಾವುದೇ ಪಬ್ಲಿಕ್ ಪೋಸ್ಟ್ ಮಾಡಲು ಸಾಧ್ಯವಿಲ್ಲ. ಹೀಗ ಮಾಡಲು ನೀವು ನಿಮ್ಮ ಪ್ರೊಫೈಲ್ ಅನ್ನು ಅನ್ ಲಾಕ್ ಮಾಡುವುದು ಅನಿವಾರ್ಯವಾಗಲಿದೆ. ಹೀಗಾಗಿ ನೀವು ಈ ಆಯ್ಕೆಯನ್ನು ಬಳಸುವ ಮೊದಲು ನೀವು ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಲು ಬಯಸುವಿರೋ ಅಥವಾ ಇಲ್ಲವೋ ಎಂಬುದರ ಕುರಿತು ಸ್ಪಷ್ಟತೆ ಹೊಂದಿರಬೇಕು.
ಮುಂದಿನ ವಾರಗಳಲ್ಲಿ ತನ್ನ ಈ ವೈಶಿಷ್ಟ್ಯವನ್ನು ಎಲ್ಲ ಬಳಕೆದಾರರಿಗಾಗಿ ಬಿಡುಗಡೆಗೊಳಿಸಲು ಫೇಸ್ ಬುಕ್ ಯೋಜನೆ ರೂಪಿಸುತ್ತಿದೆ. ಹೀಗಾಗಿ ಏಕಕಾಲಕ್ಕೆ ಇದು ಎಲ್ಲರಿಗೂ ಲಭಿಸುವುದು ಸಾಧ್ಯವಿಲ್ಲ.