ನವದೆಹಲಿ: ಒಡಿಶಾದ ಕರಾವಳಿ ಭಾಗದ 10,000 ಗ್ರಾಮಗಳು ಮತ್ತು 52 ನಗರಗಳು ಇಂದು ಅಪ್ಪಳಿಸಲಿರುವ ಭೀಕರ 'ಫಾನಿ' ಚಂಡಮಾರುತಕ್ಕೆ ಸಿಲುಕಲಿವೆ ಎಂಬ ಮುನ್ಸೂಚನೆ ಬೆನ್ನಲ್ಲೇ 11.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. 


COMMERCIAL BREAK
SCROLL TO CONTINUE READING

ಗುರುವಾರ ಮಧ್ಯರಾತ್ರಿಯಿಂದಲೇ ಭುವನೇಶ್ವರದಿಂದ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಅಲ್ಲದೆ, ಕೊಲ್ಕತ್ತಾ ವಿಮಾನ ನಿಲ್ದಾಣದಿಂದಲೂ ಸಹ ವಿಮಾನ ಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದ ಬಳಿಕ ವಿಮಾನ ಸೇವೆ ಆರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಜೊತೆಗೆ ರೈಲು ಸಂಚಾರವನ್ನೂ ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 


ಸಚಿವ ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ನೇತೃತ್ವದಲ್ಲಿ ನಡೆದ ಎನ್ಸಿಎಂ ಸಭೆ ಬಳಿಕ, ಒಡಿಶಾದ 10,000 ಗ್ರಾಮಗಳು ಮತ್ತು 52 ನಗರಗಳು ಫಾನಿ ಚಂಡಮಾರುತದಿಂದ ತತ್ತರಿಸಲಿದ್ದು, ಆ ಭಾಗದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಗೃಹ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳಕ್ಕೆ  ಸೂಚನೆ ನೀಡಿತ್ತು. ಅಲ್ಲದೆ, ಈಗಾಗಲೇ 900ಕ್ಕೂ ಅಧಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ. 


ಒಡಿಶಾದ ಗಂಜಾಂ, ಗಜಪತಿ, ಖುರ್ದ ಪುರಿ, ಜಗತ್ ಸಿಂಗ್ ಪುರ, ಕೆನ್ದ್ರಪಾರಾ, ಭದ್ರಕ್, ಜೈಪುರ್ ಮತ್ತು ಬಾಲಾಸೂರ್ ಜಿಲ್ಲೆಗಳಲ್ಲಿ ಫಾನಿ ಚಂಡಮಾರುತ ಅಪ್ಪಳಿಸುವ ಭೀತಿಯಿದೆ. ಅಂತೆಯೇ, ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ, ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಿಗೂ ಸಹ ಚಂಡಮಾರುತದಿಂದ ತೊಂದರೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.