ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರೈತರು ಹಾಗೂ ಯುವಜನತೆ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಝೀ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಪೂರ್ವಾಂಚಲ ಭಾಗದಲ್ಲಿ ಸಮಾಜವಾದಿ ಪಕ್ಷ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಪುರ್ವಾಚಲ ಎಕ್ಸ್ ಪ್ರೆಸ್ ವೇ ಯೋಜನೆಯನ್ನು ಸಮಾಜವಾದಿ ಪಕ್ಷದ ಸರ್ಕಾರ ಹಮ್ಮಿಕೊಂಡಿತ್ತು. ಆದರೆ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದಾಗಿ ಮತ್ತೆರಡು ವರ್ಷ ವಿಳಂಬವಾಗಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ.


ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಅವರ ಸವಾಲನ್ನುಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್, ಮೋದಿ ಮತ್ತು ಯೋಗಿ ಇಬ್ಬರೂ ಅವರ ಸಂಸದೀಯ ಕ್ಷೇತ್ರಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ನೀಡಲಿ. ಈ ದೇಶದ ಯುವಕರು ಮತ್ತು ರೈತರನ್ನು ಬಿಜೆಪಿ ಮೋಸ ಮಾಡಿದೆ. ಹಾಗಾಗಿ ನಿರುದ್ಯೋಗಿ ಯುವಕರು ಮತ್ತು ಬಡ ರೈತರು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ವಿರುದ್ಧ ಮತಹಾಕಲಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.


ಅಜಂಗಢ ಕ್ಷೇತ್ರದ ಬಗ್ಗೆ ಮಾತನಾಡಿದ ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಎಸ್ಪಿ ಸಾಕಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದರು. 


ಏತನ್ಮಧ್ಯೆ ವಾರಣಾಸಿ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ನಾಮಪತ್ರ ತಿರಸ್ಕೃತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಖಿಲೇಶ್, ಚುನಾವಣಾ ಆಯೋಗ ತೇಜ್ ಬಹದ್ದೂರ್ ನಾಮಪತ್ರ ರದ್ದುಪಡಿಸದಿದ್ದರೆ ಆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಕಠಿಣ ಸ್ಪರ್ಧೆ ಎದುರಿಸುತ್ತಿದ್ದರು ಎಂದರು. 2014ರಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಎಂಬುದು ಗಮನಾರ್ಹ.