ದೇಶಾದ್ಯಂತ ರೈತ ಸಂಘಟನೆಗಳಿಂದ ಪ್ರತಿಭಟನೆಗೆ ಚಾಲನೆ
ನವದೆಹಲಿ: ರೈತರು ದೇಶಾದ್ಯಂತ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ.ಶುಕ್ರವಾರದಿಂದ ಪ್ರಾರಂಭವಾದ ಈ ಪ್ರತಿಭಟನೆ ಹತ್ತು ದಿನಗಳ ಕಾಲ ನಡೆಯಲಿದೆ ಎಂದು ಹೇಳಲಾಗಿದೆ.
ಪ್ರತಿಭಟನೆಯ ಭಾಗವಾಗಿ ರೈತರು ರಸ್ತೆಗಿಳಿದು ತರಕಾರಿ ಮತ್ತು ಕೃಷಿ ಉತ್ಪನ್ನಗಳನ್ನು ರಸ್ತೆಗೆ ಚಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಸಾಲಮನ್ನಾ, ಸ್ವಾಮಿನಾಥನ್ ವರದಿ ಜಾರಿ, ಕನಿಷ್ಠ ಆದಾಯ ಯೋಜನೆಗೆ ಆಗ್ರಹಿಸಿ ರೈತರು ಈ ಪ್ರತಿಭಟನೆಯನ್ನು ಕೈಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರೈತ ಸಂಘಟನೆಗಳು ಈಗಾಗಲೆ ಮಾರುಕಟ್ಟೆಗಳಿಗೆ ಬಹಿಷ್ಕ್ರಾರ ಹಾಕಿವೆ,ಈ ಹಿನ್ನಲೆಯಲ್ಲಿ ಪಂಜಾಬ್ ,ಹರ್ಯಾಣ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಬೆಲೆ ಏರಿಕೆ ಮತ್ತು ಕೃಷಿ ಉತ್ಪನ್ನಗಳ ಕೊರತೆ ಉಂಟಾಗಲಿದೆ ಎನ್ನಲಾಗಿದೆ.
ಪ್ರತಿಭಟನೆಯ ಪ್ರಯುಕ್ತ ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾ ಸಂಘ ಸಂಚಾಲಕ ಶಿವಕುಮಾರ್ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ " 'ಗಾಂವ್ ಬಂದ್' ಪ್ರತಿಭಟನೆಯನ್ನು ಸುಮಾರು 22 ರಾಜ್ಯಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಅಲ್ಲದೆ ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನು ಮಾರಲು ನಗರದ ಮಾರುಕಟ್ಟೆಗೆ ಬರದಂತೆ ಸೂಚಿಸಲಾಗಿದೆ ಎಂದರು.
ಈ ಪ್ರತಿಭಟನೆಯ ಕೊನೆಯ ದಿನ ಅಂದ್ರೆ ಜೂನ್ 10 ರಂದು ಭಾರತ ಬಂದ್ ನ್ನು ರೈತ ಸಂಘಟನೆಗಳು ಹಮ್ಮಿಕೊಳ್ಳಲಿವೆ ಎಂದು ತಿಳಿಸಿದರು.