ನವದೆಹಲಿ: ಕಿಸಾನ್ ಮುಕ್ತಿ ಮಾರ್ಚ್ ನ ಭಾಗವಾಗಿ ಸುಮಾರು 200ಕ್ಕೂ ಅಧಿಕ ರೈತ ಸಂಘಟನೆಗಳು ಕರೆ ನೀಡಿದ್ದ ದಿಲ್ಲಿ ಚಲೋ ಕರೆಗೆ ರಾಷ್ಟ್ರದ ರಾಜಧಾನಿಯಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ.


COMMERCIAL BREAK
SCROLL TO CONTINUE READING

ಕೃಷಿ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ ನೀಡಬೇಕು ಮತ್ತು ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕೆಂದು ಸೇರಿದಂತೆ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರರು ಪ್ರತಿಭಟನೆ ನಡೆಸಿದರು.


ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಸರ್ಕಾರ ಚುನಾವಣೆಗೂ ಮೊದಲು ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿದರಲ್ಲದೆ, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಧಾರಣೆಯನ್ನು ತರುವ ಮೂಲಕ ಮಧ್ಯವರ್ತಿಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು.


ಇನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಾಷ್ಟ್ರೀಯ ಫಸಲ್‌ ಬಿಮಾ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ರಾಜ್ಯಸರ್ಕಾರಗಳಿಗೆ ಹೆಚ್ಚಿನ ಅನುದಾನವನ್ನು ಆವರ್ತ ನಿಧಿಗೆ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.


ಕೇಂದ್ರ ಸರ್ಕಾರ ರಾಜಕೀಯ ಜಾಣಕುರುಡತನವನ್ನು ತೋರಿಸಿದೆ​: ಕೋಡಿಹಳ್ಳಿ ಚಂದ್ರಶೇಖರ್
ಇದೆ ವೇಳೆ ಕರ್ನಾಟಕದಿಂದ ದಿಲ್ಲಿ ಚಲೊಗೆ ಆಗಮಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ "ಈ ಹಿಂದೆ ಮೋದಿ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿತ್ತು, ಈಗ ಅದನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಆ ಮೂಲಕ ತಾನು ರೈತರ ಪರ ಅಲ್ಲ ಎನ್ನುವುದನ್ನು ಸಾಬೀತುಪಡಿಸಿ, ರಾಜಕೀಯ ಜಾಣಕುರುಡತನವನ್ನು ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಗಾಂಧಿ ಜಯಂತಿಯಂದು ರೈತರ ಮೇಲೆ ಲಾಠಿ ಚಾರ್ಜ್ ಮಾಡುವುದರ ಮೂಲಕ ಕೇಂದ್ರ ಸರ್ಕಾರ ರೈತರ ಮೇಲೆ ದೌರ್ಜನ್ಯ ನಡೆಸಿದೆ. ಕೇಂದ್ರ ಸರ್ಕಾರದ ಈ ಎಲ್ಲಾ ನಡೆಯನ್ನು ವಿರೋಧಿಸಿ ದಿಲ್ಲಿ ಚಲೋ ಹಮ್ಮಿಕೊಂಡಿದ್ದು, ನಾನು ಕೇಂದ್ರ ಸರ್ಕಾರಕ್ಕೆ ಹೇಳುವುದಿಷ್ಟೇ, ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವಾದಲ್ಲಿ ರಾಜಕೀಯ ತೀರ್ಮಾನವನ್ನು ನಾವು ಕೈಗೊಳ್ಳುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು. ಕರ್ನಾಟಕದಿಂದ ಸುಮಾರು 10 ಸಾವಿರ ರೈತರ ಆಗಮಿಸಿದ್ದಾರೆ ದಿಲ್ಲಿ ಚಲೋ ಚಳವಳಿಯಲ್ಲಿ ಭಾಗವಹಿಸಿದ್ದಾರೆ.