ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು "ಮಿಶ್ರ ಜನಾಂಗ" ಎಂದು ವಿವರಿಸುತ್ತಾ, "ಮುಸ್ಲಿಂ" ತಂದೆ ಮತ್ತು ಕ್ರಿಶ್ಚಿಯನ್ ತಾಯಿಯ ಮಗ ಹೇಗೆ ಬ್ರಾಹ್ಮಣರಾಗಬಹುದು ಎಂದು ಪ್ರಶ್ನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹೆಗಡೆ, "ಅಪ್ಪ ಮುಸ್ಲಿಂ‌, ಅಮ್ಮ ಕ್ರಿಶ್ಚಿಯನ್ ಆಗಿರುವಾಗ ಮಗ ಮಾತ್ರ ಹೇಗೆ ಬ್ರಾಹ್ಮಣನಾಗುತ್ತಾನೆ?" ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

'ರಾಹುಲ್ ಗಾಂಧಿಗೆ ಈ ದೇಶದ ಬಗ್ಗೆ ಗೊತ್ತಿಲ್ಲ. ಧರ್ಮದ ಬಗ್ಗೆ ಯಾವುದೇ ವಿಚಾರ ಗೊತ್ತಿಲ್ಲ. ಸುಳ್ಳು ಹೇಳುವುದನ್ನೇ ರಾಹುಲ್‌ ಕಾಯಕವಾಗಿಸಿಕೊಂಡಿದ್ದಾರೆ. ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಹೀಗೆ ಆಗುವುದಕ್ಕೆ ಸಾಧ್ಯವಿಲ್ಲ. ಆತನ ತಂದೆ ಮುಸ್ಲಿಂ, ತಾಯಿಯೊಬ್ಬರು ಕ್ರಿಶ್ಚಿಯನ್ ಮತ್ತು ಮಗ ಬ್ರಾಹ್ಮಣನಂತೆ. ಇದು ಹೇಗೆ ಸಾಧ್ಯ? ಕಾಂಗ್ರೆಸ್‌ನ ಲೆಬೊರೇಟರಿಯಲ್ಲಿ ಮಾತ್ರ ಇಂಥ ಹೈಬ್ರಿಡ್‌ ತಳಿಗಳು ತಯಾರಾಗಲು ಸಾಧ್ಯ. ಆದರೆ ದೇಶದ ಜನತೆ ಈಗ ಕಾಂಗ್ರೆಸ್‌ ನಾಯಕರ ಇಂಥ ಸುಳ್ಳುಗಳನ್ನು ನಂಬಲು ಸಿದ್ಧರಿಲ್ಲ' ಎಂದು ಅನಂತಕುಮಾರ್‌ ಹೆಗಡೆ ತಿಳಿಸಿದ್ದಾರೆ. 


ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಟೆಂಪಲ್ ರನ್ ಮಾಡಿದ್ದ ರಾಹುಲ್ ಗಾಂಧಿ ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ರಿಜಿಸ್ಟರ್ ನಲ್ಲಿ ತಾನು ಹಿಂದೂ ಎಂದು ನೋಂದಾಯಿಸಿದ್ದರು. ಬಳಿಕ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಜನವಾರಧಾರಿ ಬ್ರಾಹ್ಮಣ ಎಂದಿದ್ದರು. ರಾಜಸ್ಥಾನ ವಿಧಾನಸಭಾ ಚುನಾವಣೆ ವೇಳೆ ಪುಷ್ಕರ್ ಬ್ರಹ್ಮ ಜೀ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಾಹುಲ್ ತಮ್ಮನ್ನು ಕೌಲ್ ಬ್ರಾಹ್ಮಣನೆಂದು ಬಣ್ಣಿಸಿದ್ದರು. ಅವರದು ದತ್ತಾತ್ರೇಯ ಗೋತ್ರ ಎಂದು ಹೇಳಿದ್ದರು. 


ಇತ್ತೀಚೆಗೆ ಅನಂತಕುಮಾರ ಹೆಗಡೆ, ಹಿಂದೂ ಹುಡುಗಿಯ ಮೈಮುಟ್ಟಿದವರ ಕೈ ಇರಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರತಿ ಭಾರತೀಯರನ್ನು ಮುಜುಗರಕ್ಕೊಳಪಡಿಸುವ ಹೆಗ್ಡೆ ಅವರು ಮಂತ್ರಿಯ ಹುದ್ದೆಗೆ ಅರ್ಹತೆ ಹೊಂದಿಲ್ಲ, ವಜಾಗೊಳಿಸಬೇಕು ಎಂದು ಸೋಮವಾರ ಟ್ವೀಟ್ ಮಾಡಿದ್ದರು.