ಕೆಲವರಿಗೆ ಮಾತ್ರ ಇಂತಹ ಧೈರ್ಯವಿರುತ್ತೆ: ರಾಹುಲ್ ನಿರ್ಧಾರಕ್ಕೆ ಪ್ರಿಯಾಂಕ ಮೆಚ್ಚುಗೆ
ರಾಹುಲ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, 2019 ರ ಚುನಾವಣೆಯ ಸೋಲಿನ ಜವಾಬ್ದಾರಿ ನನ್ನದೇ. ನಮ್ಮ ಪಕ್ಷದ ಭವಿಷ್ಯದ ಅಭಿವೃದ್ಧಿಗೆ ಹೊಣೆಗಾರಿಕೆ ಮುಖ್ಯವಾಗಿದೆ, ಅದಕ್ಕಾಗಿಯೇ ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿ ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಹುಲ್ ಸಹೋದರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ "ಇಂತಹ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಕೆಲವರಿಗೆ ಮಾತ್ರ ಇರುತ್ತದೆ" ಎಂದಿದ್ದಾರೆ.
"ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ; ಅಂತೆಯೇ ನಾನೀಗ ಪಕ್ಷದ ಅಧ್ಯಕ್ಷನಲ್ಲ, ಹಾಗಾಗಿ ಪಕ್ಷ ಬೇಗನೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು" ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿ ಟ್ವೀಟ್ ಮಾಡಿದ್ದರು. ರಾಜೀನಾಮೆ ನಿರ್ಧಾರದ ಜತೆಗೆ ರಾಹುಲ್ ನಾಲ್ಕು ಪುಟಗಳ ವಿದಾಯ ಪತ್ರವನ್ನೂ ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದರು.
ರಾಹುಲ್ ಗಾಂಧಿಯವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಧೈರ್ಯ ತೋರಿರುವ ರಾಹುಲ್ ಗಾಂಧಿ ಬಗ್ಗೆ ಗೌರವವಿದೆ ಎಂದು ತಿಳಿಸಿದ್ದಾರೆ. ಧೈರ್ಯವಂತರಿಗೆ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಿರುತ್ತದೆ, ನಿನ್ನ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.