ಧೀಮಂತ ನಾಯಕ ಎಂ.ಕರುಣಾನಿಧಿ ಅಂತಿಮಯಾತ್ರೆ ಆರಂಭ, ಸಾವಿರಾರು ಮಂದಿ ಭಾಗಿ
ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಹೊತ್ತ ವಾಹನ ವಲ್ಲಜಾ ರಸ್ತೆ ಮೂಲಕವಾಗಿ ಶಿವಾನಂದ ರಸ್ತೆ, ಅಣ್ಣಾ ರಸ್ತೆ, ವಲ್ಲಾಜಾ ರಸ್ತೆ, ಕಾಮರಾಜ್ ರಸ್ತೆ ಮಾರ್ಗವಾಗಿ ಮರೀನಾ ಬೀಚ್ ತಲುಪಲಿದೆ.
ಚೆನ್ನೈ: ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಮುತ್ತುವೇಲ್ ಕರುಣಾನಿಧಿ ಅವರ ಅಂತಿಮ ಯಾತ್ರೆ ಆರಂಭವಾಗಿದ್ದು, ಸಂಜೆ ಮರೀನಾ ಬೀಚ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಚೆನ್ನೈನ ರಾಜಾಜಿ ಹಾಲ್ ನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನದ ನಂತರ ಪುಷ್ಪಗಳಿಂದ ಅಲಂಕಾರಗೊಂಡಿರುವ ಸೇನಾ ವಾಹನದಲ್ಲಿ ಕಲೈಗ್ನಾರ್ ಅಂತಿಮ ಯಾತ್ರೆ ಆರಂಭವಾಗಿದ್ದು, ಮರೀನಾ ಬೀಚ್ ಮೆರವಣಿಗೆ ನಡೆಯಲಿದೆ. ಮರೀನಾ ಬೀಚ್ ನಲ್ಲಿ ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಸಮಾಧಿ ಬಳಿಯೇ ಕರುಣಾನಿಧಿಯ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಹೊತ್ತ ವಾಹನ ವಲ್ಲಜಾ ರಸ್ತೆ ಮೂಲಕವಾಗಿ ಶಿವಾನಂದ ರಸ್ತೆ, ಅಣ್ಣಾ ರಸ್ತೆ, ವಲ್ಲಾಜಾ ರಸ್ತೆ, ಕಾಮರಾಜ್ ರಸ್ತೆ ಮಾರ್ಗವಾಗಿ ಮರೀನಾ ಬೀಚ್ ತಲುಪಲಿದೆ. ಅಂತಿಮ ಯಾತ್ರೆಯ ವೇಳೆ ಶಾಂತಿಯಿಂದಿರುವಂತೆ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಡಿಎಂಕೆ ಮನವಿ ಮಾಡಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ಜುಲೈ 28ರಂದು ಚೆನೈಣ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ಸಂಜೆ ವಿಧಿವಶರಾಗಿದ್ದರು. ಇಂದು ಬೆಳಗ್ಗೆಯಿಂದ ರಾಜಾಜಿ ಹಾಲ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕರುಣಾನಿಧಿ ಅವರ ನಿಧನದಿಂದಾಗಿ ತಮಿಳುನಾಡಿನಲ್ಲಿ ಸೂತಕದ ಛಾಯೆ ಆವರಿಸಿದೆ.