ಉತ್ತರಪ್ರದೇಶದಲ್ಲಿ ಪೋಲಿಸ್ ಪೇದೆ ಹತ್ಯೆ; 90 ಮಂದಿ ವಿರುದ್ಧ ಎಫ್ಐಆರ್ ದಾಖಲು
ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೂಚಿಸಿದ್ದಾರೆ.
ಲಕ್ನೋ: ಉತ್ತರಪ್ರದೇಶದ ಘಾಜಿಪುರದಲ್ಲಿ ಪ್ರಧಾನಿ ಮೋದಿ ಭಾಷಣದ ಬಳಿಕ ನಡೆದ ಕಲ್ಲು ತೂರಾಟದಲ್ಲಿ ಓರ್ವ ಪೊಲೀಸ್ ಪೇದೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು 90 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಘಾಜಿಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಕರ್ತವ್ಯ ಪೂರ್ಣಗೊಳಿಸಿದ್ದ ಸುರೇಶ್ ವತ್ಸ್ ಅವರು, ವಾಪಸ್ಸಾಗುತ್ತಿದ್ದ ವೇಳೆ ನಿಶಾದ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಿಶಾದ್ ಪಕ್ಷದ ಕಾರ್ಯಕರ್ತರು, ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದನ್ನು ನಿಲ್ಲಿಸುವಂತೆ ಸುರೇಶ ಹೇಳಿದ್ದರಿಂದ ಉದ್ರಿಕ್ತಗೊಂಡ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿ ಹಿಂಸಾಚಾರ ನಡೆಸಿದ್ದರು. ಕಲ್ಲು ತೂರಾಟಕ್ಕೆ ಪೇದೆ ಸುರೇಶ ಬಲಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದು, 90 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನು ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೂಚಿಸಿದ್ದಾರೆ. ಅಲ್ಲದೇ ಕಾನ್ಸ್‌ಟೆಬಲ್ ಸುರೇಶ್ ವತ್ಸ್ ಅವರ ಪತ್ನಿಗೆ 40 ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ. ಮುಂದೆ ಅವರ ಮಕ್ಕಳ ಶಿಕ್ಷಣದ ವೆಚ್ಚವನ್ನೂ ಸರ್ಕಾರವೇ ಭರಿಸುವುದಾಗಿ ಸಿಎಂ ಕಚೇರಿಯಿಂದ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.