ನವದೆಹಲಿ: ಇಲ್ಲಿನ ಮೋತಿ ನಗರದಲ್ಲಿ ಶನಿವಾರ ರೋಡ್ ಶೋ ನಡೆಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಿದ್ದ 33 ವರ್ಷದ ವ್ಯಕ್ತಿ ವಿರುದ್ಧ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಆರೋಪಿಯನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 323 ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಆರೋಪಿ ಸುರೇಶ್ ಗುಜರಿ ವ್ಯಾಪಾರಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸುರೇಶ ಎಎಪಿ ಬೆಂಗಲಿಗನಾಗಿದ್ದು, ಅದರ ಎಲ್ಲಾ ರ್ಯಾಲಿಗಳಿಗೆ ಸಂಘಟಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆದರೆ ಪಕ್ಷದ ಕಾರ್ಯಕರ್ತರ ವರ್ತನೆಯಿಂದಾಗಿ ಕೆಲದಿನಗಳಿಂದ ಪಕ್ಷದಿಂದ ದೂರವಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.  


ಈ ಘಟನೆ ಬಗ್ಗೆ ಡಿಸಿಪಿ ಹಂತದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ದೆಹಲಿ ಪೊಲೀಸ್ ಹೆಚ್ಚುವರಿ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿತ್ ಮಿಥಲ್ ತಿಳಿಸಿದ್ದಾರೆ.


ನವದೆಹಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೋತಿ ನಗರದಲ್ಲಿ ಪಕ್ಷದ ಅಭ್ಯರ್ಥಿ ಬೃಜೇಶ್ ಗೋಯಲ್ ಪರ ಸಿಎಂ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸುತ್ತಿದ್ದ ವೇಳೆ, ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿ ಕಾರನ್ನು ಏರಿ, ಕೇಜ್ರಿವಾಲ್ ಕೆನ್ನೆಗೆ ಹೊಡೆದಿದ್ದ. ಬಳಿಕ ಆ ಸ್ಥಳದಿಂದ ಪರಾರಿಯಾಗಲು ಯತ್ನಿಸಿ ಆತನನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.