ಮುಂಬೈ: ಇಲ್ಲಿನ ಬಾಂದ್ರಾದಲ್ಲಿರುವ ಎಂಟಿಎನ್ಎಲ್ ಕಟ್ಟಡದೊಳಗೆ ಸೋಮವಾರ ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಸಿಲುಕಿರುವ ಸಾಧ್ಯತೆ ಇದೆ. 



COMMERCIAL BREAK
SCROLL TO CONTINUE READING

ಕೂಡಲೇ ಸ್ಥಳಕ್ಕಾಗಮಿಸಿದ ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದು, ಬಳಿಕ 10 ಹೆಚ್ಚುವರಿ ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳ ಪ್ರಯತ್ನಿಸುತ್ತಿದೆ. ಅಲ್ಲದೆ, ಕಟ್ಟಡದೊಳಗೆ ಸಿಲುಕಿರುವ ನೂರಕ್ಕೂ ಅಧಿಕ ಮಂದಿಯನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಕನಿಷ್ಠ 60 ಜನರನ್ನು ರಕ್ಷಿಸಲಾಗಿದೆ. 



ಈ ಕಟ್ಟಡದಲ್ಲಿ ಒಟ್ಟು 9 ಮಹಡಿಗಳಿದ್ದು, ಬೆಂಕಿಯ ಹೊಗೆಯಲ್ಲಿ ಹಲವಾರು ಎಮ್​ಟಿಎನ್​ಎಲ್​ ನೌಕರರು, ಸಾರ್ವಜನಿಕರು ಸಿಲುಕಿದ್ದಾರೆ ಎನ್ನಲಾಗಿದೆ. ಸೋಮವಾರ ಮಧ್ಯಾಹ್ನ ಸುಮಾರು 3.15ರ ಸುಮಾರಿಗೆ ಕಟ್ಟಡದ 3ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇತರ ಮಹಡಿಗಳಿಗೂ ಆವರಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. 


ಎಂಟಿಎನ್‌ಎಲ್‌ ಕಟ್ಟಡದಲ್ಲಿ ಬೆಂಕಿ ನಂದಿಸುವ ಕಾರ್ಯಕ್ಕೆ ಅಗ್ನಿಶಾಮಕ ದಳ ಹೊಸದಾಗಿ ಪರಿಚಯಿಸಿರುವ ರೋಬೋಟ್‌ನ ಸಹಾಯ ಪಡೆದುಕೊಳ್ಳಲಾಗಿದೆ. 



ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.