ಮುಂಬೈಯಲ್ಲಿ 16 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಐವರ ಮೃತ್ಯು
ಚೆಂಬೂರ್ ವಸತಿ ಕಟ್ಟಡದಲ್ಲಿ ಸಂಭವಿಸಿರುವ ಅಗ್ನಿ ಅವಗಢ
ಮುಂಬೈ: ಮುಂಬೈನ ಚೆಂಬೂರ್ ನಲ್ಲಿರುವ 16 ಅಂತಸ್ತಿನ ಕಟ್ಟಡದಲ್ಲಿ ಗುರುವಾರ ಸಂಜೆ ಸಂಭವಿಸಿದ ಅಗ್ನಿ ಅವಗಢದಲ್ಲಿ ನಾಲ್ವರು ಹಿರಿಯ ನಾಗರೀಕರೂ ಸೇರಿದಂತೆ 5 ಮಂದಿ ಸಾವನ್ನಪ್ಪಿದ್ದಾರೆ.
ಮುಂಬಯಿಯ ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ವಿ.ಎನ್.ಪನಿಗ್ರಾಹಿ ಪ್ರಕಾರ, ಸರ್ಗುಮ್ ಸೊಸೈಟಿ ಆಫ್ ಚೆಂಬೂರ್ ನಲ್ಲಿ 14ನೇ ಅಂತಸ್ತಿನಲ್ಲಿ ಗುರುವಾರ ಸಂಜೆ ಅಗ್ನಿ ಅನಾಹುತ ಸಂಭವಿಸಿದೆ. ರಾತ್ರಿ 07:46ಕ್ಕೆ ವಿಷಯ ತಿಳಿದಿದ್ದು, ತಕ್ಷಣ 8 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಪ್ರಾರಂಭವಾಗಿದೆ.
ಬ್ರಿಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್ನ ದುರಂತ ನಿರ್ವಹಣಾ ಘಟಕದ ಅಧಿಕೃತ ಅಧಿಕಾರಿಯೊಬ್ಬರು, ತಿಲಕ್ ನಗರದ ಉಪನಗರದಲ್ಲಿರುವ 16 ಅಂತಸ್ತಿನ ಕಟ್ಟಡದ 14 ನೇ ಮಹಡಿಯಲ್ಲಿ ಬೆಂಕಿ ಅವಗಢ ಸಂಭವಿಸಿದೆ. ಮುಂಬೈ ಅಗ್ನಿಶಾಮಕ ಸೇವೆಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಜ್ಜುಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ರಾಜ್ವಾಡಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟವರನ್ನು ಸುನೀತಾ ಜೋಶಿ (72), ಭಲ್ಚಂದ್ರ ಜೋಶಿ (72), ಸುಮನ್ ಶ್ರೀನಿವಾಸ್ ಜೋಷಿ (83), ಸರ್ಲಾ ಸುರೇಶ್ ಗಂಗರ್ (52) ಮತ್ತು ಲಕ್ಷ್ಮಿಬೆನ್ ಪ್ರಾಂಜಿ ಗಂಗರ್ (83) ಎಂದು ಗುರುತಿಸಲಾಗಿದೆ.