ನವದೆಹಲಿ: ದೆಹಲಿಯ ತುಘಲಕಾಬಾದ್ ಪ್ರದೇಶದ ಕೊಳೆಗೇರಿಗಳಲ್ಲಿ ಮಂಗಳವಾರ (ಮೇ 26) ಮುಂಜಾನೆ 1 ಗಂಟೆ ಸುಮಾರಿಗೆ ಭಾರೀ ಬೆಂಕಿ ಅನಾಹುತ ಸಂಭವಿಸಿದ್ದು ಸುಮಾರು 1,000 ಗುಡಿಸಲುಗಳು ಸುಟ್ಟುಹೋಗಿವೆ. ಬೆಂಕಿ ನಿಯಂತ್ರಿಸಲು ಕನಿಷ್ಠ 30 ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.



COMMERCIAL BREAK
SCROLL TO CONTINUE READING

ಆಗ್ನೇಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜೇಂದ್ರ ಪ್ರಸಾದ್ ಮೀನಾ ಎಎನ್‌ಐಗೆ ಮಾತನಾಡಿ "ತುಘಲಕಾಬಾದ್‌ನ ಕೊಳೆಗೇರಿಗಳಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಬೆಂಕಿಯ ಬಗ್ಗೆ ನಮಗೆ ಮಾಹಿತಿ ಬಂದಿದೆ. ಎಲ್ಲಾ ಪೊಲೀಸ್ ಸಿಬ್ಬಂದಿ ಕೂಡಲೇ ಇಲ್ಲಿಗೆ ತಲುಪಿದರು. ಸುಮಾರು 1,000-1,200 ಗುಡಿಸಲುಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದವು" ಎಂದು ಮಾಹಿತಿ ಒದಗಿಸಿದರು.


ಅಗ್ನಿಶಾಮಕ ಅಧಿಕಾರಿಯೊಬ್ಬರ ಪ್ರಕಾರ ಬೆಂಕಿಯ ಘಟನೆಗೆ ಸಂಬಂಧಿಸಿದಂತೆ ಇಲಾಖೆಗೆ ಬೆಳಿಗ್ಗೆ 12: 15 ರ ಸುಮಾರಿಗೆ ಕರೆ ಬಂದಿದೆ.


ದಕ್ಷಿಣ ದೆಹಲಿ ವಲಯದ ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಎಸ್‌ಎಸ್ ತುಲಿ ಮಾತನಾಡಿ, ಭಾರಿ ಪ್ರಮಾಣದ ಬೆಂಕಿಯನ್ನು ನಂದಿಸಲು ಸುಮಾರು 30 ಅಗ್ನಿಶಾಮಕ ಟೆಂಡರ್‌ಗಳನ್ನು ಪ್ರದೇಶಕ್ಕೆ ರವಾನಿಸಲಾಗಿದೆ. ಬೆಂಕಿ ಈಗ ನಿಯಂತ್ರಣದಲ್ಲಿದೆ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಬೆಂಕಿಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.


ಸುಮಾರು 30 ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿ ಅನಾಹುತಕ್ಕೆ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿದೆ. ಸದ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತುಲಿ ಹೇಳಿದ್ದಾರೆ.