ಶ್ರೀನಗರ್: ಜನವರಿ 26ಕ್ಕೂ ಮುನ್ನವೇ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ದೊಡ್ಡ ಉಗ್ರ ದಾಳಿಯೊಂದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀನಗರ ಪೊಲೀಸರು ಜೈಶ್-ಎ-ಮೊಹಮ್ಮದ್ ಸಂಘಟನೆಯ ಐವರು ಉಗ್ರರನ್ನು ಬಂಧಿಸಿದ್ದು, ಅವರ ಬಳಿಯಿಂದ ಭಾರಿ ಪ್ರಮಾದದ ಸ್ಫೋಟಕ ಸಾಮಗ್ರಿಗಳನ್ನೂ ವಶಕ್ಕೆ ಪಡೆದಿದ್ದಾರೆ. ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಜಿಲಾಟಿನ್ ರಾಡ್ಸ್, ನೈಟ್ರಿಕ್ ಆಸಿಡ್, ಜ್ಯಾಕೆಟ್ ಗಳು, ಪಿಸ್ತೂಲುಗಳು, ಸಿಡಿಮದ್ದುಗಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಂಧಿತ ಐವರು ಉಗ್ರರ ಗುರುತು ಪತ್ತೆಹಚ್ಚಲಾಗಿದ್ದು, ಬಂಧಿತರಲ್ಲಿ ಎಜಾಜ್ ಅಹ್ಮದ್ ಶೇಖ್, ಉಮರ್ ಹಮೀದ್ ಶೇಖ್, ಸಾಹೀಲ್ ಫಾರೂಕ್ ಗೊಜರಿ, ನಾಸಿರ್ ಅಹ್ಮದ್ ಮೀರ್ ಹಾಗೂ ಇಮ್ತಿಯಾಜ್ ಅಹ್ಮದ್ ಚಿಕಲಾ ಶಾಮೀಲಾಗಿದ್ದಾರೆ. ಆ ಪ್ರಾಂತ್ಯದ ಮಾರುಕಟ್ಟೆಯಲ್ಲಿ ತೆರೆಯಲಾಗುತ್ತಿದ್ದ ಹೊಸ ಮಳಿಗೆಗಳ ಬಗ್ಗೆ ಅಸಮಾಧಾನ ಹೊಂದಿದ್ದ ಈ ಉಗ್ರರು, ಅದರಲ್ಲಿ ವ್ಯತ್ಯಯ ಉಂಟುಮಾಡಲು ಯೋಜಿಸಿದ್ದರು ಎಂದು ಪೋಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಇವರ ಬಳಿ ದೊರೆತ ಶಸ್ತ್ರಾಸ್ತ್ರಗಳ ಆಧಾರದ ಮೇಲೆ ಇವರ ಉದ್ದೇಶ ಸರಿಯಾಗಿಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ.


ಜನವರಿ 8ರಂದು ಮಧ್ಯಾಹ್ನ 1.30ರ ಸುಮಾರಿಗೆ ಶ್ರೀನಗರದ ಹೊರವಲಯದಲ್ಲಿರುವ ಹಬ್ಬಕ್ ಕ್ರಾಸಿಂಗ್ ಬಳಿ ಓರ್ವ ಶಂಕಿತ ಉಗ್ರ CRPFನ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ. ಆದರೆ, ಈ ಗ್ರೆನೇಡ್ CRPF ಪೋಸ್ಟ್ ಹೊರಗಡೆ ಇರುವ ರಸ್ತೆಯ ಮೇಲೆ ಬಿದ್ದು, ಹಲವರು ಗಾಯಗೊಂಡಿದ್ದರು. ಇದರ ತನಿಖೆ ನಡೆಸಲು CCTV ಫೂಟೇಜ್ ಸಹಾಯವನ್ನು ಪಡೆಯಲಾಗಿತ್ತು. ಈ ಪೂಟೇಜ್ ಆಧರಿಸಿ ಉಗ್ರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಕಾರ್ಯಾಚರಣೆಯ ವೇಳೆ ಪೊಲೀಸರು ಮೊದಲು ಎಜಾಜ್ ಅಹ್ಮದ್ ಶೇಖ್ ಹಾಗೂ ಉಮರ್ ಹಮೀದ್ ಶೇಖ್ ಅವರನ್ನು ಬಂಧಿಸಿದ್ದಾರೆ. ಈ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ವೇಳೆ, ಗ್ರೆನೇಡ್ ದಾಳಿಯಲ್ಲಿ ಶಾಮೀಲಾಗಿರುವುದನ್ನು ಈ ಇಬ್ಬರು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ನವೆಂಬರ್ 26ರಂದು ಕಾಶ್ಮೀರ್ ಯೂನಿವರ್ಸಿಟಿ ಬಳಿ ಇರುವ ಸರ್ ಸಯ್ಯದ್ ಗೇಮ್ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿಯೂ ಕೂಡ ಇವರು ಶಾಮೀಲಾಗಿದ್ದರು ಎನ್ನಲಾಗಿದೆ.