ನವದೆಹಲಿ: ಯಾವ ಕ್ಷಣಕ್ಕಾಗಿ ಇಡೀ ದೇಶ ಹಲವು ವರ್ಷಗಳಿಂದ ಕಾಯುತ್ತಿತ್ತೋ, ಆ ಕ್ಷಣಕ್ಕೆ ಇಂದು ಇಡೀ ದೇಶವೇ ಸಾಕ್ಷಿಯಾಗಿದೆ. ಹೌದು, 5 ರಾಫೆಲ್ ಯುದ್ಧ ವಿಮಾನಗಳು (Rafale Fighter Jets) ಇಂದು ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿವೆ. ಇದಕ್ಕೂ ಮೊದಲು ಈ ಐದು ಯುದ್ಧವಿಮಾನಗಳು ಬ್ಯಾರತದ ವಾಯು ಮಾರ್ಗಕ್ಕೆ ಪ್ರವೇಶಿಸುತ್ತಿದ್ದಂತೆ, ಭಾರತೀಯ ಸೇನೆ ಯುದ್ಧನೌಕೆ INS ಕೊಲ್ಕತ್ತಾ ಮೂಲಕ ಸ್ವಾಗತಿಸಿ, 'ಇದೊಂದು ಹೆಮ್ಮೆಯ ಉಡಾವಣೆ, ಹ್ಯಾಪಿ ಲ್ಯಾಂಡಿಂಗ್' ಎಂದು ಶುಭ ಕೋರಿತ್ತು. ರಾಫೆಲ್ ಯುದ್ಧವಿಮಾನಗಳ ಲ್ಯಾಂಡಿಂಗ್ ಹಿನ್ನೆಲೆ ಪೊಲೀಸರು ಅಂಬಾಲಾ ವಾಯುನೆಲೆಯಲ್ಲಿರುವ ಮಿಲಿಟರಿ ನೆಲೆಗೆ ಭಾರಿ ಭದ್ರತೆಯನ್ನು ಒದಗಿಸಿದ್ದಾರೆ.


COMMERCIAL BREAK
SCROLL TO CONTINUE READING

ಫ್ರೆಂಚ್ ಬಂದರು ಬೋರ್ಡೂದಲ್ಲಿನ ಮರಿಗ್ನಾಕ್ ವಾಯುನೆಲದಿಂದ ಸೋಮವಾರ ಈ ಯುದ್ಧವಿಮಾನಗಳು ತನ್ನ ಹಾರಾಟ ಆರಂಭಿಸಿದ್ದವು. ಸುಮಾರು 7,000 ಕಿ.ಮೀ ದೂರವನ್ನು ಕ್ರಮಿಸಿದ ನಂತರ ಈ ವಿಮಾನಗಳು ಬುಧವಾರ ಮಧ್ಯಾಹ್ನ ಅಂಬಾಲಾ ತಲುಪಿವೆ. ಈ ವಿಮಾನಗಳಲ್ಲಿ ಒಂದು ಆಸನ ಇರುವ ಮೂರು ಹಾಗೂ ಎರಡು ಆಸನಗಳನ್ನು ಹೊಂದಿರುವ ಎರಡು ಯುದ್ಧವಿಮಾನಗಳು ಇವೆ.  ಈ ಯುದ್ಧ ವಿಮಾನಗಳ ಆಗಮನದ ಹಿನ್ನೆಲೆ ಅಧಿಕಾರಿಗಳು ಅಂಬಾಲಾ ಮಿಲಿಟರಿ ನೆಲೆಯ ಸುತ್ತ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಫೋಟೋ ಕ್ಲಿಕ್ಕಿಸುವುದು ಮತ್ತು ವೀಡಿಯೊ ಚಿತ್ರೀಕರಣದ ಮೇಲೆ ನಿಷೇಧ ವಿಧಿಸಲಾಗಿತ್ತು. ಮಿಲಿಟರಿ ನೆಲೆಯ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಡ್ರೋನ್‌ಗಳ ಹಾರಾಟ ಕೂಡ ನಿಷೇಧಿಸಲಾಗಿತ್ತು.


ಧುಲಕೊತ್, ಬಲದೇವ್ ನಗರ್ ಹಾಗೂ ಪಂಜಖೊರಾ ಸೇರಿದಂತೆ ವಾಯುನೆಲೆಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಜನರ ಗುಂಪುಗೂಡುವಿಕೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ.  ಈ ಕುರಿತು ಮಾಹಿತಿ ನೀಡಿರುವ ಅಂಬಾಲಾ ಉಪಆಯುಕ್ತ ಅಶೋಕ್ ಕುಮಾರ್ ಶರ್ಮಾ, ವಾಯಿ ನೆಲೆಯ ಸುತ್ತಮುತ್ತ ಸೆಕ್ಷನ್ 144 ವಿಧಿಸಲಾಗಿರುವ ಕಾರಣ ಸೇನಾ ನೆಲೆಯಲ್ಲಿ ಫೋಟೋ ಕ್ಲಿಕ್ಕಿಸುವುದಾಗಲಿ ಅಥವಾ ವಿಡಿಯೋ ಚಿತ್ರೀಸುವುದಾಗಲಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.


ಕಳೆದ ಎರಡು ದಶಕಗಳಿಗಿಂತ ಅಧಿಕ ಸಮಯದಲ್ಲಿ ರಾಫೆಲ್ ಯುದ್ಧವಿಮಾನ ಖರೀದಿ ಭಾರತ ನಡೆಸಿರುವ ಮೊದಲ ಅತಿದೊಡ್ಡ ಖರೀದಿಯಾಗಿದೆ. ಈ ಯುದ್ಧವಿಮಾನಗಳ ಆಗಮನದಿಂದ ಭಾರತೀಯ ಯುದ್ಧ ಕ್ಷಮತೆಯಲ್ಲಿ ಮಹತ್ವಪೂರ್ಣ ಬದಲಾವಣೆಯಾಗಲಿದೆ. ಸೆಪ್ಟೆಂಬರ್ 23, 2016ರಲ್ಲಿ ಭಾರತ ಫ್ರಾನ್ಸ್ ಏರೋಸ್ಪೇಸ್ ಕಂಪನಿ ದಲ್ಸಾಲ್ಟ್ ಏವಿಯೇಶನ್ ಜೊತೆ ಒಟ್ಟು 36 ಯುದ್ಧವಿಮಾನಗಳ ಖರೀದಿಗಾಗಿ ಸುಮಾರು 59000 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು.