ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಬೆದರಿಕೆ ಹೆಚ್ಚುತ್ತಿದೆ. ಹರಿಯಾಣದ ಅನೇಕ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಶನಿವಾರ ಸುಮಾರು ಒಂಬತ್ತು ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ ನಂತರ ದೆಹಲಿಯ ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡುಗಡೆಯಾದ ನಂತರ ದೆಹಲಿಯಲ್ಲಿ ಯಮುನಾ ನದಿ ತೀರದಲ್ಲಿ ತಗ್ಗು ಪ್ರದೆಶಗಳಲ್ಲಿ ವಾಸಿಸುವವರಿಗೆ ಪ್ರವಾಹದ ಭೀತಿ ಎದುರಾಗಿದೆ. ಯಮುನಾ ನದಿಯ ನೀರಿನ ಮಟ್ಟವು 204.5 ಮೀಟರ್‌ನಿಂದ 205.94 ಮೀಟರ್‌ಗೆ 1.44 ಮೀಟರ್‌ಗೆ ಏರಿದೆ. ಯುಮುನಾ ಸೇತುವೆಯಿಂದ ರೈಲುಗಳ ಸಂಚಾರವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಮಾಹಿತಿಯ ಪ್ರಕಾರ, ಇದುವರೆಗೆ 10,000 ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ.


ದೆಹಲಿಯಲ್ಲಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಆಡಳಿತ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಇಂದು, 23,816 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು. ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದ ಜನರಿಗಾಗಿ 2120 ಪರಿಹಾರ ಶಿಬಿರಗಳನ್ನು ನಿರ್ಮಿಸಲಾಗುವುದು, ಅದರಲ್ಲಿ 1100 ಶಿಬಿರಗಳು ಈಗಾಗಲೇ ಸಿದ್ಧವಾಗಿವೆ ಎಂದು ಹೇಳಲಾಗಿದೆ.

ದೆಹಲಿಯ ತಗ್ಗು ಪ್ರದೇಶಗಳಲ್ಲಿ ಆಡಳಿತ ಅಧಿಕಾರಿಗಳು 30 ಸ್ಥಳಗಳನ್ನು ಸೂಚಿಸಿದ್ದಾರೆ. ಅಲ್ಲದೆ, ಈ ಸ್ಥಳಗಳಲ್ಲಿ 53 ದೋಣಿಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಸಂಖ್ಯೆಗಳನ್ನು ನೀಡಲಾಗಿದೆ. ದೆಹಲಿಯಲ್ಲಿ ವಾಸಿಸುವ ಜನರು ಪ್ರವಾಹದಿಂದ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಿದರೆ, ಅವರು 21210849, 22421656 ಸಂಖ್ಯೆಗೆ ಕರೆ ಮಾಡಬಹುದು.


6 ವರ್ಷಗಳ ದಾಖಲೆಯನ್ನು ಮುರಿದ ನೀರಿನ ಮಟ್ಟ:
ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರನ್ನು ಬಿಡುಗಡೆ ಮಾಡಿದ ನಂತರ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಿ ದೆಹಲಿ ನೀರಾವರಿ ಇಲಾಖೆಗೆ ಮಾಹಿತಿ ನೀಡಿದೆ. ಹತ್ನಿಕುಂಡ್ ಬ್ಯಾರೇಜ್‌ನಲ್ಲಿನ ನೀರಿನ ಮಟ್ಟವು 6 ವರ್ಷಗಳ ದಾಖಲೆಯನ್ನು ಮುರಿದಿದೆ. ಭಾನುವಾರ ನೀರಿನ ಮಟ್ಟ 8.28 ಲಕ್ಷ ಕ್ಯೂಸೆಕ್‌ಗಳಿಗೆ ತಲುಪಿದೆ. ಇದಕ್ಕೂ ಮೊದಲು 2013 ರಲ್ಲಿ ನೀರಿನ ಮಟ್ಟ 8 ಲಕ್ಷ ಕ್ಯೂಸೆಕ್ ಆಗಿತ್ತು. ಈವರೆಗೆ ಯಮುನಾದಲ್ಲಿ ಹತ್ನಿಕುಂಡ್ಬ್ಯಾರೇಜ್‌ನಿಂದ 8 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.


ತಗ್ಗು ಪ್ರದೇಶಗಳಲ್ಲಿ ಎಚ್ಚರಿಕೆ:
ಹತ್ನಿಕುಂಡ್ ಬ್ಯಾರೇಜ್‌ನಿಂದ  ನೀರು ಬಿಡುಗಡೆಯಾದಾಗಿನಿಂದ, ಯಮುನಾ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತವಾಗಿರುವಂತೆ ಎಚ್ಚರಿಕೆ ನೀಡಲಾಗುತ್ತಿದೆ. ಯಮುನಾದ ನೀರಿನ ಮಟ್ಟ ಮಂಗಳವಾರ ಏರಿಕೆಯಾಗಬಹುದು, ಇದರಿಂದಾಗಿ ಜನರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಆಡಳಿತ ಅಧಿಕಾರಿಗಳು ಹೇಳಿದ್ದಾರೆ.