ನವದೆಹಲಿ: ದೆಹಲಿಯ ವಿಜ್ಞಾನ್ ಭವನದಲ್ಲಿಂದು ನಡೆದ ಜಿಎಸ್‏ಟಿ ಕೌನ್ಸಿಲ್ ಸಭೆಯಲ್ಲಿ ಪ್ರತಿದಿನ ಜನಸಾಮಾನ್ಯರು ಬಳಸುವ 33 ವಸ್ತುಗಳ ಮೇಲಿನ ಜಿಎಸ್‏ಟಿ ದರವನ್ನು ಇಳಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆ ಬಳಿಕ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

7 ವಸ್ತುಗಳ ಮೇಲಿನ ಜಿಎಸ್‏ಟಿ ದರವನ್ನು 28 ರಿಂದ 18 ಪ್ರತಿಶತದಷ್ಟು ಇಳಿಸಲು ನಿರ್ಧರಿಸಲಾಗಿದೆ. ಉಳಿದ ವಸ್ತುಗಳ ಮೇಲಿನ ಜಿಎಸ್‏ಟಿ ದರವನ್ನು ಶೇ. 18 ರಿಂದ ಶೇ. 12ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು. ಈಗ ಕೇವಲ 28 ವಸ್ತುಗಳ ಮೇಲೆ ಮಾತ್ರ ಶೇ.28 ಜಿಎಸ್‏ಟಿ ದರ ವಿಧಿಸಲಾಗುತ್ತದೆ. ಜನವರಿ 1, 2019 ರಿಂದ ಈ ದರಗಳು ಜಾರಿಯಾಗಲಿವೆ ಎಂದು ವಿತ್ತ ಸಚಿವರು ತಿಳಿಸಿದರು.



ಈ ಎಲ್ಲಾ ವಸ್ತುಗಳು ಅಗ್ಗ:
- ಸಿಮೆಂಟ್, ವಾಹನ ಭಾಗಗಳು, ಟೈರ್, ಎಸಿ ಮತ್ತು ಟಿವಿಗಳ ಮೇಲೆ 18 ಪ್ರತಿಶತ ಜಿಎಸ್‏ಟಿ
- ಧಾರ್ಮಿಕ ಯಾತ್ರೆಗಳಿಗೆ ಹೋಗುವ ವಿಮಾನಗಳ ಮೇಲಿನ ಜಿಎಸ್‏ಟಿ ದರ ಇಳಿಕೆ.
- 100 ರೂ. ವರೆಗಿನ ಸಿನಿಮಾ ಟಿಕೆಟ್ ಅಗ್ಗ. ರೂ 100 ರವರೆಗೆ ಟಿಕೆಟ್ 12% ಜಿಎಸ್‏ಟಿ
- 100 ರೂ.ಗಿಂತ ಅಧಿಕ ಮೊತ್ತದ ಸಿನಿಮಾ ಟಿಕೆಟ್ ಗೆ 18% ಜಿಎಸ್‏ಟಿ ವಿಧಿಸಲಾಗುವುದು.


ಇಂದು ನಡೆದ ಜಿಎಸ್‏ಟಿ ಕೌನ್ಸಿಲ್ ಸಭೆಯ ಬಳಿಕ ಮಾತನಾಡಿದ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ಐಶಾರಾಮಿ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಜಿಎಸ್‏ಟಿ ದರವನ್ನು  18% ಅಥವಾ ಅದಕ್ಕಿಂತ ಕಡಿಮೆ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಇದಕ್ಕೆ ಸರ್ಕಾರದ ಸಹಮತವೂ ಇದೇ. ಹಾಗಾಗಿ 34 ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಜಿಎಸ್‏ಟಿ ದರವನ್ನು 18 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಇರಿಸಲಾಗಿದೆ ಎಂದು ಹೇಳಿದರು.