ನವದೆಹಲಿ: ಬಹು ಕೋಟಿ ಮೇವು ಹಗರಣದ ಅಪರಾಧಿ ಆರ್ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಪೆರೋಲ್ ಅವಧಿ ಮುಗಿಯುವ ಮುನ್ನವೇ ಗುರುವಾರ ಪೊಲೀಸರಿಗೆ ಶರಣಾಗಿದ್ದಾರೆ. 


COMMERCIAL BREAK
SCROLL TO CONTINUE READING

ಅನಾರೋಗ್ಯದ ಕಾರಣದ ಮೇಲೆ ರಾಂಚಿ ಕೋರ್ಟ್'ನಿಂದ ಆರು ವಾರಗಳ ಜಾಮೀನು ಪಡೆದಿದ್ದ ಲಾಲೂ ಪ್ರಸಾದ್ ಯಾದವ್ ಅವರು ರಾಂಚಿಯ ರಾಜೇಂದ್ರ ವೈದ್ಯಕೀಯ ಶಿಕ್ಷಣ ಸಂಸ್ಥೆ (ರಿಮ್ಸ್‌)ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹೆಚ್ಚುವರಿ ಚಿಕಿತ್ಸೆಗಾಗಿ ಅನಾರೋಗ್ಯದ ಆಧಾರದ ಮೇಲೆ ಪೆರೋಲ್ ಅವಧಿಯನ್ನು 3 ತಿಂಗಳವರೆಗೆ ವಿಸ್ತರಿಸುವಂತೆ ಲಾಲೂ ವಕೀಲರು ಜಾರ್ಖಂಡ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ತಿರಸ್ಕರಿಸಿದ್ದ ಜಾರ್ಖಂಡ್ ಹೈಕೋರ್ಟ್ ಆಗಸ್ಟ್ 30ರೊಳಗೆ ಸಿಬಿಐಗೆ ಶರಣಾಗುವಂತೆ ಆದೇಶ ನೀಡಿತ್ತು.


ಮೇವು ಹಗರಣ ಪ್ರಕರಣಗಳ ಆರೋಪದ ಮೇಲೆ ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿ ಲಾಲು ಪ್ರಸಾದ್ ಯಾದವ್ ಜೈಲುವಾಸ ಅನುಭವಿಸುತ್ತಿದ್ದಾರೆ. ಡಿಸೆಂಬರ್ 23, 2017 ರಂದು ಲಾಲುಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಕೋರ್ಟ್ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅನುಮತಿ ನೀಡಿತ್ತು.


2013 ರಿಂದ ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿರುವ ಲಾಲೂ ಪ್ರಸಾದ್ ಯಾದವ್ ಅವರಿಗೆ, ಇತ್ತೀಚಿನ ದಮ್ಕಾ ಖಜಾನೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.