ಮೇವು ಹಗರಣ: ಇಂದು ಪ್ರಕಟಗೊಳ್ಳಲಿದೆ ಲಾಲೂ ವಿರುದ್ಧದ ನಾಲ್ಕನೇ ಪ್ರಕರಣದ ತೀರ್ಪು
ಲಾಲೂ ಪ್ರಸಾದ್ ಯಾದವ್ ವಿರುದ್ಧದ ನಾಲ್ಕನೇ ಮೇವು ಹಗರಣದ ಪ್ರಕರಣವನ್ನು ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ತೀರ್ಪನ್ನು ಕಾಯ್ದಿರಿಸಿತ್ತು.
ರಾಂಚಿ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಬಹು-ಕೋಟಿ ಮೇವು ಹಗರಣಕ್ಕೆ ಸಂಬಂಧಿಸಿ ನಾಲ್ಕನೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯವು ಶನಿವಾರ ತೀರ್ಪು ನೀಡಲಿದೆ.
1990 ರಲ್ಲಿ ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಮೇವು ಹಗರಣಗಳಿಗೆ ಸಂಬಂಧಿಸಿದಂತೆ ಲಾಲೂ ವಿರುದ್ಧ 6 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮೂರು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ.
ಮೇವು ಹಗರಣದ ಮೊದಲ ಪ್ರಕರಣದಲ್ಲಿ ಲಾಲು ಅಪರಾಧಿ ಎಂದು ಸಾಬೀತಾಗಿ 2013 ರಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ 2017 ರ ಡಿ. 23 ರಂದು ಮತ್ತೊಂದು ಪ್ರಕರಣದಲ್ಲಿ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಜನವರಿ 24 ರಂದು ಮೂರನೇ ಪ್ರಕರಣದಲ್ಲಿ 5 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಇದೀಗ ರಾಂಚಿ ಹಾಗೂ ಪಾಟ್ನಾದಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಲಾಲೂ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಲಾಲೂ ಪ್ರಸಾದ್ ಯಾದವ್ ಬಿರ್ಸಾ ಮುಂಡಾ ಕೇಂದ್ರಿಯ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ.