ಅರಣ್ಯ ಅಭಿವೃದ್ಧಿ ಶುಲ್ಕ ಸಂಗ್ರಹ: ಹೈಕೋರ್ಟ್ ನಡೆಗೆ ತಡೆ ನೀಡಿದ ಸುಪ್ರಿಂ
ನವದೆಹಲಿ: ಅರಣ್ಯ ಅಭಿವೃದ್ಧಿ ಶುಲ್ಕವನ್ನು ವಾಪಸ್ಸು ನೀಡಬೇಕೆಂದು ಆದೇಶಿಸಿದ್ದ ಹೈಕೋರ್ಟ್ ತೀರ್ಪಿಗೆ ಸುಪ್ರಿಂಕೋರ್ಟ್ ತಡೆ ನೀಡಿದೆ.
ಅರಣ್ಯವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಗಣಿ ಮಾಲೀಕರಿಂದ 420 ಕೋಟಿ ರೂಪಾಯಿಯನ್ನು ಸಂಗ್ರಹಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಗಣಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಗಣಿ ಮಾಲಿಕರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಂಗ್ರಹ ಮಾಡಿದ್ದ ಹಣವನ್ನು ವಾಪಾಸು ನೀಡುವಂತೆ ತೀರ್ಪು ನೀಡಿತ್ತು.
ಆದರೆ ಈ ವಿಚಾರವಾಗಿ ರಾಜ್ಯ ಸರ್ಕಾರವು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು. ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಹೈಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡಿದೆ.
ಗಣಿಗಾರಿಕೆ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿತ್ತು. ಆದರೆ ಗಣಿ ಮಾಲೀಕರು ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.