ಕೊಡಗು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಹಾಸನ, ಕೊಡಗು ಮತ್ತು ವಿರಾಜಪೇಟೆಯ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು. 


COMMERCIAL BREAK
SCROLL TO CONTINUE READING

ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯದ ಸುಮಾರು 10 ರಿಂದ 12 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜಲಾಶಯಗಳು ಭರ್ತಿಯಾಗಿ ನೀರು ಹೊರಬಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ನೆರೆ ಉಂಟಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರಿಗಾಗಿ ತಾತ್ಕಾಲಿಕ ಗಂಜಿ ಕೇಂದ್ರಗಳು ಮತ್ತು ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಹಾಗೆಯೇ ಸರ್ಕಾರದ ವತಿಯಿಂದ ನೆರೆ ಸಂತ್ರಸ್ತರಿಗಾಗಿ ಯಾವ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂಬುದನ್ನು ಅರಿತು, ಸಂತ್ರಸ್ತರ ನೆರವಿಗೆ ಉಳಿದ ಅಗತ್ಯತೆಗಳ ಬಗ್ಗೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ" ಎಂದು ಹೇಳಿದರು. 


ಇದೇ ವೇಳೆ, ನೆರೆ ಸಂತ್ರಸ್ತರಿಗೆ ಆಹಾರ ಮತ್ತು ಕುಡಿಯುವ ನೀರನ್ನು ವಿತರಿಸಲಾಯಿತು.


ಇದಕ್ಕೂ ಮುನ್ನ ಭಾನುವಾರ ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಿಸುತ್ತಾ, "ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ನಾವು  3,000 ಕೋಟಿ ರೂ.ಗಳ ತಕ್ಷಣದ ಸಹಾಯಕ್ಕಾಗಿ ಮನವಿ ಮಾಡಿದ್ದೇವೆ. 16 ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಇಲ್ಲಿನ ಜನರ ಪರಿಸ್ಥಿತಿ ಕರುಣಾಜನಕವಾಗಿದೆ. ಇನ್ನೆರಡು ದಿನಗಳಲ್ಲಿ ಉಳಿದ ಜಿಲ್ಲೆಗಳ ಸಮೀಕ್ಷೆ ನಡೆಸಿ ಪರಿಸ್ಥಿತಿ ಪರಿಶೀಲಿಸಲಿದ್ದೇವೆ" ಎಂದರು.