ಯೋಗಿ ಸರ್ಕಾರದ ಸಚಿವ ಹಾಗೂ ಮಾಜಿ ಕ್ರಿಕೆಟಿಗ Chetan Chauhan ನಿಧನ
ಯುಪಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ, ಮಾಜಿ ಕ್ರಿಕೆಟಿಗ ಚೇತನ್ ಚೌಹಾನ್ (Chetan Chauhan) ಇಂದು ತಮ್ಮ ಕೊನೆಯುಸಿರೆಳೆದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಲಖನೌ: ಮಾಜಿ ಕ್ರಿಕೆಟಿಗ ಹಾಗೂ ಉತ್ತರ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಚೇತನ್ ಚೌಹಾನ್ (Chetan Chauhan) ನಿಧನರಾಗಿದ್ದಾರೆ. ಮೊದಲು ಕೊರೊನಾ ಸೋಂಕಿಗೆ ಗುರಿಯಾಗಿ ಗುಣಮುಖರಾಗಿ ಮನೆಗೆ ಮರಳಿದ್ದ ಅವರಲ್ಲಿ ಬಳಿಕ ಕಿಡ್ನಿ ಸೋಂಕು ಕಾಣಿಸಿಕೊಂಡಿತ್ತು ಬಳಿಕ ಉತ್ತರ ಪ್ರದೇಶದಲ್ಲಿ ಹೋಮ್ ಗಾರ್ಡ್ ಸಚಿವರಾಗಿದ್ದ ಚೇತನ್ ಚೌಹಾನ್ ಅವರನ್ನು ಗುರುಗ್ರಾಮ್ ದ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಅವರು ಮೂತ್ರಪಿಂಡ ವೈಫಲ್ಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದ ಹಿನ್ನೆಲೆ ಕಳೆದ ಎರಡು ದಿನಗಳಿಂದ ಅವರನ್ನು ಲೈಫ್ ಸಪೋರ್ಟ್ ಸಿಸ್ಟಂ ಮೇಲೆ ಇರಿಸಲಾಗಿತ್ತು.
ಜುಲೈ 19 ರಂದು ಚೇತನ್ ಚೌಹಾನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಬಳಿಕ ಅವರನ್ನು SGPGIಗೆ ದಾಖಲಿಸಲಾಗಿತ್ತು. ಕೊರೊನಾ ಸೋಂಕಿನಿಂದ ಮುಕ್ತಿ ಸಿಕ್ಕರೂ ಕೂಡ ಚೇತನ್ ಚೌಹಾನ್ ಅವರಲ್ಲಿ ಕಿಡ್ನಿ ಹಾಗೂ ಬ್ಲಡ್ ಪ್ರೆಶರ್ ಸಮಸ್ಯೆ ಕಾಣಿಸಿಕೊಂಡಿತ್ತು
ಬಳಿಕ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಕಾರಣ ಅವರನ್ನು ಗುರುಗ್ರಾಮ್ ದ ಮೆದಾಂತಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. 72 ವರ್ಷ ವಯಸ್ಸಿನ ಚೇತನ್ ಚೌಹಾನ್ ಎರಡು ಬಾರಿ ಬಿಜೆಪಿಯ ಲೋಕಸಭಾ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಕಳೆದ ವರ್ಷ ಅವರು ಯೋಗಿ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದರು. ಪ್ರಸ್ತುತ, ಉತ್ತರ ಪ್ರದೇಶದ ಯೋಗಿ ಮಂತ್ರಿಮಂಡಲದಲ್ಲಿ ಅವರು ಸೈನಿಕ ಕಲ್ಯಾಣ, ಹೋಮ್ ಗಾರ್ಡ್, PRD ಹಾಗೂ ನಾಗರಿಕ ಸುರಕ್ಷಾ ಸಚಿವಾಲಯಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಪ್ರದೇಶದ ಅಮರೋಹಾ ಜಿಲ್ಲೆಯ ನೌಗಾಮ್ ಕ್ಷೇತ್ರದಿಂದ ಚೇತನ್ ಚೌಹಾನ್ ವಿಧಾನಸಭೆಗೆ ಶಾಸಕರಾಗಿ ಆಯ್ಕೆಗೊಂಡಿದ್ದರು.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಕಾನೂನು ಸಚಿವ ಬೃಜೇಶ್ ಪಾಠಕ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆಗಸ್ಟ್ 2ರಂದು ಯೋಗಿ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕಮಲ ರಾಣಿ ವರುಣ್ ಕೂಡ ನಿಧನರಾಗಿದ್ದರು. ಅವರೂ ಕೂಡ ಕೊರೊನಾ ಸೋಂಕಿಗೆ ಗುರಿಯಾಗಿದ್ಕಾದ ಕಾರಣ SGPGI ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇವರನ್ನು ಹೊರತುಪಡಿಸಿ ಯುಪಿ ಸಂಪುಟದಲ್ಲಿ ಕ್ರೀಡಾ ಸಚಿವರಾಗಿರುವ ಉಪೇಂದ್ರ ತಿವಾರಿ, ರಾಜೇಂದ್ರ ಪ್ರತಾಪ್ ಸಿಂಗ್, ಧರ್ಮ ಸಿಂಗ್ ಸೋನಿ, ಕ್ಯಾಬಿನೆಟ್ ಸಚಿವ ಮೋತಿ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಕೊರೊನಾ ಸೋಂಕಿಗೆ ಗುರಿಯಾಗಿದ್ದರು. ಆದರೆ, ಇವರೆಲ್ಲರೂ ಗುಣಮುಖರಾಗಿ ತಮ್ಮ ಮನೆಗೆ ಮರಳಿದ್ದಾರೆ. ಭಾರತೀಯ ಜನತಾ ಪಕ್ಷದ ಪ್ರದೇಶಾಧ್ಯಕ್ಷರಾಗಿರುವ ಸ್ವತಂತ್ರ ದೇವ್ ಸಿಂಗ್ ಕೂಡ ಕಳೆದ ವಾರ ಕೊರೊನಾ ಪಾಸಿಟಿವ್ ಕಂಡುಬಂದಿದ್ದರು.